ಕನ್ನಡಪ್ರಭ ವಾರ್ತೆ ಬೆಂಗಳೂರು
ಅಧಿಕ ಹಣಕ್ಕೆ ಬೇಡಿಕೆ ಇರಿಸಿದ ಓಲಾ ಕ್ಯಾಬ್ ಚಾಲಕನೊಬ್ಬ ಪ್ರಯಾಣಿಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ಪದ್ಮನಾಭಗರದ ಆರ್.ಕೆ.ಲೇಔಟ್‌ನಲ್ಲಿ ನಡೆದಿದೆ.ಈ ಸಂಬಂಧ ಶುಭಂ ಎಂಬುವವರು ‘ಎಕ್ಸ್’ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಕ್ಯಾಬ್ ಚಾಲಕ ಕಾಂತರಾಜು ಎಂಬಾತನ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಕ್ಯಾಬ್ ಚಾಲಕನ ಗೂಂಡಾ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಘಟನೆ ವಿವರ:ಶುಭಂ ಅವರು ಶನಿವಾರ ಬೆಳಗ್ಗೆ ತಮ್ಮ ಚಿಕ್ಕಮ್ಮನಿಗಾಗಿ ಓಲಾ ಕ್ಯಾಬ್ ಬುಕ್ ಮಾಡಿದ್ದರು. ಡ್ರಾಪ್ ಮುಗಿದ ಬಳಿಕ ಚಾಲಕ ಕಾಂತರಾಜು ನಿಗದಿತ ಪ್ರಯಾಣಕ್ಕಿಂತ 3 ಕಿ.ಮೀ. ಹೆಚ್ಚುವರಿಯಾಗಿದೆ. ಹೀಗಾಗಿ ಹೆಚ್ಚುವರಿ ಹಣ ನೀಡುವಂತೆ ಕೇಳಿದ್ದಾನೆ. ಈ ವೇಳೆ ಚಿಕ್ಕಮ್ಮ, ಕ್ಯಾಬ್ ಚಾಲಕ ಹೆಚ್ಚುವರಿ ಹಣಕ್ಕೆ ಬೇಡಿಕೆ ಇರಿಸಿರುವ ವಿಚಾರವನ್ನು ಶುಭಂಗೆ ತಿಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದಿರುವ ಶುಭಂ, ಆ್ಯಪ್‌ನ ಪ್ರಕಾರ ನಾನು ಹಣ ಕೊಡುತ್ತೇನೆ. ಅಧಿಕ ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಕೆಲ ಕಾಲ ವಾಗ್ವಾದ ನಡೆದಿದೆ. ಈ ವೇಳೆ ಶುಂಭಂ ಆ್ಯಪ್‌ನಲ್ಲಿ ಎಷ್ಟು ಹಣ ತೋರಿಸುತ್ತಿದೆ. ಎಷ್ಟು ಕಿ.ಮೀ. ಹೆಚ್ಚುವರಿಯಾಗಿದೆ ಎಂದು ತೋರಿಸಿ ಚಾಲಕನ ಮೊಬೈಲ್ ಮುಟ್ಟಲು ಮುಂದಾಗಿದ್ದಾರೆ.
ಇದರಿಂದ ಕೆರಳಿದ ಚಾಲಕ ಕ್ಯಾಬ್‌ನಿಂದ ಕೆಳಗೆ ಇಳಿದು ಅವಾಚ್ಯ ಶಬ್ಧಗಳಿಂದ ಶುಭಂ ಅವರಿಗೆ ನಿಂದಿದ್ದಾನೆ. ಹಲ್ಲೆಗೆ ಮುಂದಾದಾಗ ಸ್ಥಳೀಯರು ತಡೆದಿದ್ದಾರೆ. ಬಳಿಕ ಜಗಳ ಬಿಡಿಸಿ ಇಬ್ಬರನ್ನು ಸ್ಥಳದಿಂದ ಕಳುಹಿಸಿದ್ದಾರೆ. ಚಾಲಕ ನಿಂದಿಸುವುದನ್ನು ಶುಭಂ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಚಾಲಕನ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ.ಘಟನೆಯಿಂದ ಭಯವಾಗಿದೆ: ಶುಭಂ
ಓಲಾ ಕ್ಯಾಬ್ ಚಾಲಕನ ವರ್ತನೆಯಿಂದ ನಮಗೆ ಭಯವಾಗಿದೆ. ಹೆಚ್ಚುವರಿ ಹಣ ನೀಡಲು ನಾವು ನಿರಾಕರಿಸಿದಾಗ ಚಾಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ನನ್ನ ಚಿಕ್ಕಮ್ಮನನ್ನೂ ತಳ್ಳಿ ನಿಂದಿಸಿದರು. ನಾವು ಕನ್ನಡಿಗರನ್ನು ಪ್ರೀತಿಸುತ್ತೇವೆ. ಕನ್ನಡವನ್ನು ಕಲಿತು ಮಾತನಾಡುತ್ತೇವೆ. ಹೀಗಿದ್ದರೂ ಕ್ಯಾಬ್ ಚಾಲಕ ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಈ ಘಟನೆಯಿಂದ ನಮಗೆ ಭಯವಾಗಿದೆ ಎಂದು ಶುಭಂ ಆತಂಕ ವ್ಯಕ್ತಪಡಿಸಿದ್ದಾರೆ.