ಒಪ್ಪಂದ ಮಾಡಿಕೊಂಡ ಬೆಳೆಗಾರರು । ಬೀಜ, ರಸ ಗೊಬ್ಬರ ಮತ್ತು ಅಗತ್ಯ ಔಷಧಿ ಪೂರೈಸುವ ಕಂಪನಿ
ಚಂದು ಕೊಂಚಿಗೇರಿಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಮಲ್ಲಿಗೆ ನಾಡು ಹೂವಿನಹಡಗಲಿ ತಾಲೂಕಿನಲ್ಲಿ ಚೆಂಡು ಹೂವು ಕೃಷಿಯತ್ತ ರೈತರು ಸಾಗಿದ್ದಾರೆ. ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡ ಹಿನ್ನೆಲೆ ಬೆಳೆಗಾರರು ನಷ್ಟದಿಂದ ಪಾರಾಗಿದ್ದಾರೆ.ಹೌದು, ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ರೈತರು ಮೆಕ್ಕೆಜೋಳ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳಲ್ಲದೇ, ಚೆಂಡು ಹೂವು ಬೆಳೆಯುತ್ತಿದ್ದಾರೆ. ವಿವಿಧ ಬಣ್ಣ ಮತ್ತು ಹತ್ತಾರು ರೀತಿ ಔಷಧಿ ತಯಾರಿಕೆಯಾಗುವ ಚೆಂಡು ಹೂವಿಗೆ ಭಾರಿ ಬೇಡಿಕೆ ಇರುವ ಹಿನ್ನೆಲೆ ಕಂಪನಿಯವರೇ ರೈತರೊಂದಿಗೆ ಒಪ್ಪಂದ ಕೃಷಿ ಮಾಡಿಕೊಂಡು ಅವರೇ ಚೆಂಡು ಹೂ ಬೀಜ, ರಸ ಗೊಬ್ಬರ ಮತ್ತು ಅಗತ್ಯ ಔಷಧಿ ಪೂರೈಕೆ ಮಾಡುತ್ತಾರೆ.
ತಾಲೂಕಿನಲ್ಲಿ 979 ಎಕರೆ ಚೆಂಡು ಹೂ ಬೆಳೆಯುತ್ತಿದ್ದಾರೆ. ಕೆಜಿಯೊಂದಕ್ಕೆ ₹10ನಂತೆ ಕಂಪನಿಯೊಂದಿಗೆ ಒಪ್ಪಂದವಾಗಿದೆ. ಶಿರಹಟ್ಟಿ ಹಾಗೂ ತೆಲಗಿಯಲ್ಲಿ ಚೆಂಡು ಹೂವಿನಿಂದ ಇತರೆ ವಸ್ತುಗಳ ಉತ್ಪಾದಿಸುವ ಕಂಪನಿಗೆ ಚೆಂಡು ಹೂವು ಸಾಗಣೆಯಾಗುತ್ತಿದೆ. ಈ ಭಾಗದ ಬಹುತೇಕ ರೈತರು ಚೆಂಡು ಹೂವು ಬೆಳೆಯಲು ಆಸಕ್ತಿ ವಹಿಸುತ್ತಿದ್ದಾರೆ.ಚೆಂಡು ಹೂ 100 ದಿನಗಳ ಬೆಳೆಯಾಗಿದ್ದು, ಪ್ರತಿ ಎಕರೆಗೆ 10ರಿಂದ 15 ಟನ್ ಇಳುವರಿ ಬರುತ್ತದೆ. ರೈತರಿಗೆ ಹೆಚ್ಚು ನಿರ್ವಹಣೆಯ ವೆಚ್ಚವಿಲ್ಲ. ಆರಂಭದಲ್ಲೇ ಕಂಪನಿಯವರು ಒಪ್ಪಂದದಂತೆ ರಸಗೊಬ್ಬರ, ಬೀಜ ಮತ್ತು ಔಷಧಿ ಪೂರೈಕೆ ಮಾಡುತ್ತಿರುವ ಹಿನ್ನೆಲೆ ರೈತರು, ಪ್ರತಿ ಎಕರೆಗೆ ಹೂವು ಕಟಾವು ಸೇರಿದಂತೆ ಇತರೆ ವೆಚ್ಚಕ್ಕಾಗಿ ₹15 ಸಾವಿರ ವೆಚ್ಚ ತಗುಲಿದೆ.
ಚೆಂಡು ಹೂವಿಗೆ ಎಲೆ ಚುಕ್ಕೆ ರೋಗ, ಕಡ್ಡಿ ರೋಗ, ಹೂವು ಕೊರೆಯುವ ಕೀಟ ಬಾಧೆ ಬರಲಿದೆ. ಇದರ ನಿರ್ವಹಣೆಗಾಗಿ ಕಂಪನಿಯವರೇ ಔಷಧಿ ಪೂರೈಕೆ ಮಾಡುತ್ತಾರೆ, ಬೇರೆ ಬೆಳೆಗೆ ಹೋಲಿಸಿದರೆ, ಚೆಂಡು ಹೂವು ಬೆಳೆ ಉತ್ತಮವಾಗಿದೆ, ಎಕರೆಯೊಂದಕ್ಕೆ ಎಲ್ಲ ವೆಚ್ಚ ತೆಗೆದು ₹50ರಿಂದ 70 ಸಾವಿರ ಆದಾಯ ರೈತರಿಗೆ ಸಿಗಲಿದೆ. ಅಲ್ಪಾವಧಿ ಬೆಳೆಯಾಗಿದ್ದು, ಅಧಿಕ ಇಳುವರಿಯ ಜತೆಗೆ ಒಪ್ಪಂದ ಮಾಡಿಕೊಂಡು ಬೆಳೆಯುತ್ತಿರುವ ಹಿನ್ನೆಲೆ ರೈತರಿಗೆ ನಷ್ಟ ಕಡಿಮೆ ಎನ್ನುತ್ತಾರೆ ಬೆಳೆಗಾರರು.ಚೆಂಡು ಹೂ ಬೆಳೆಯುವುದರಿಂದ ಭೂಮಿಗೆ ಹಸಿರೆಲೆ ಬಿದ್ದು ಬಹಳ ಫಲವತ್ತಾಗುತ್ತದೆ. ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಬೆಳೆಯುತ್ತೇವೆ. ರೈತರಿಗೆ ಪ್ರತಿ ಟನ್‌ಗೆ ₹9400 ಬೆಲೆ ಇದೆ. ಒಪ್ಪಂದ ಕೃಷಿಯಿಂದ ನಷ್ಟ ತಪ್ಪಿದೆ ಎನ್ನುತ್ತಾರೆ ಕೊಳಚಿ ಗ್ರಾಮದ ರೈತ ಹಾಲೇಶ.