ಯಥೇಚ್ಚವಾಗಿ ಮಾವಿನ ಮರದಲ್ಲಿ ನಳನಳಿಸುತ್ತಿದೆ ಹೂವು ; ಉತ್ತಮ ಇಳುವರಿ ಬರುವ ನಿರೀಕ್ಷೆ

KannadaprabhaNewsNetwork |  
Published : Feb 22, 2025, 12:49 AM ISTUpdated : Feb 22, 2025, 12:13 PM IST
ಪೋಟೋ 1 : ಮಾವಿನ ಗಿಡದ ತುಂಬಾ ಹೂವು ಬಿಟ್ಟಿರುವುದು | Kannada Prabha

ಸಾರಾಂಶ

ಈ ವರ್ಷ ಯಥೇಚ್ಚವಾಗಿ ಮಾವಿನ ಗಿಡದಲ್ಲಿ ಹೂವಿನ ಪ್ರಮಾಣ ಅಧಿಕವಾಗಿದ್ದು, ಮಾವಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಪ್ರಮುಖವಾಗಿ ಬೂದಿ ರೋಗ, ಚಿಬ್ಬು ರೋಗ, ಅಂಗಮಾರಿ ರೋಗ, ಹೂವು ಗೊಂಚಲಿನ ರೋಗ ಬರುವುದುಂಟು. ಈ ರೋಗಗಳನ್ನು ತಡೆಗಟ್ಟಬೇಕಾದರೆ ಪ್ರಾರಂಭಿಕ ಹಂತದಲ್ಲಿ ಔಷಧಗಳನ್ನು ಸಿಂಪಡಿಸಿದರೆ ಉತ್ತಮ 

 ದಾಬಸ್‍ಪೇಟೆ : ಗ್ರಾಮೀಣ ಪ್ರದೇಶದಲ್ಲಿ ಮಾವಿನ ಮರಗಳು ಗಾಢ ಹಸಿರಿನ ಚಿಗುರು ಎಲೆಗಳಿಂದ ಕಂಗೊಳಿಸುತ್ತಿದ್ದು, ಬಂಗಾರದ ಬಣ್ಣದ ಹೂಗಳಿಂದ ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ಬಾರಿ ಉತ್ತಮ ಇಳುವರಿ ಬರುವ ನಿರೀಕ್ಷೆ ಮಾವು ಬೆಳೆಗಾರರಲ್ಲಿ ಹುಟ್ಟಿಸಿದೆ.

ಹೂವಿನ ಪ್ರಮಾಣ ಅಧಿಕ:

ಈ ವರ್ಷ ಯಥೇಚ್ಚವಾಗಿ ಮಾವಿನ ಗಿಡದಲ್ಲಿ ಹೂವಿನ ಪ್ರಮಾಣ ಅಧಿಕವಾಗಿದ್ದು, ಮಾವಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಪ್ರಮುಖವಾಗಿ ಬೂದಿ ರೋಗ, ಚಿಬ್ಬು ರೋಗ, ಅಂಗಮಾರಿ ರೋಗ, ಹೂವು ಗೊಂಚಲಿನ ರೋಗ ಬರುವುದುಂಟು. ಈ ರೋಗಗಳನ್ನು ತಡೆಗಟ್ಟಬೇಕಾದರೆ ಪ್ರಾರಂಭಿಕ ಹಂತದಲ್ಲಿ ಔಷಧಗಳನ್ನು ಸಿಂಪಡಿಸಿದರೆ ಉತ್ತಮ ಇಳುವರಿ ಪಡೆಯಬಹುದಾಗಿದೆ.

ಉತ್ತಮ ಇಳುವರಿ ನಿರೀಕ್ಷೆ:

ರೋಗಗಳನ್ನು ತಡೆಯಲು ರೈತರು ಔಷಧಿಗಳ ಸಿಂಪಡಣೆ ಮಾಡಿ ನಿಯಂತ್ರಣ ಮಾಡಬೇಕು. ಈ ಸಮಯದಲ್ಲಿಯೇ ಹೆಚ್ಚು ಎಚ್ಚರವಹಿಸುವುದು ಅಗತ್ಯವಾಗಿದೆ. ಈಗಿನ ಚಳಿ ಮಾವಿನ ಮರಗಳಿಗೆ ಉತ್ತಮ ಫಸಲು ನೀಡಲು ಪೂರಕವಾಗಿದೆ. ತಾಲೂಕಿನಲ್ಲಿ ಪ್ರಸ್ತುತ ಮಾವಿನ ಮರಗಳಲ್ಲಿ ಯಥೇಚ್ಛವಾಗಿ ಹೂವು ಕಾಣಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿ ಮಾವು ಬೆಳೆಗಾರರಿದ್ದಾರೆ.

ವಾರಕ್ಕೊಮ್ಮೆ ಔಷಧ ಸಿಂಪಡಿಸಿ:

ಮಾರ್ಚ್ ಮೊದಲ ವಾರದೊಳಗೆ ಸಂಪೂರ್ಣ ಹೂವು ಅರಳುವ ಸಾಧ್ಯತೆಯಿದ್ದು, ಮಾವಿನ ಮರಗಳಲ್ಲಿ ಬಿಟ್ಟಿರುವ ಹೂವು ರಕ್ಷಿಸಿಕೊಳ್ಳಲು ಮತ್ತು ಹೂವು ಇನ್ನೂ ಬಿಡದ ಮಾವಿನ ಮರಗಳಿಗೆ ಹೂವು ಬಿಡಲು ವಾರಕ್ಕೊಮ್ಮೆ ಔಷಧಿಗಳನ್ನು ಸಿಂಪಡಿಸುವ ಕಾರ್ಯದಲ್ಲಿ ಬೆಳೆಗಾರರು ತೊಡಗಿದ್ದಾರೆ.

ಮಾವು ಸಂರಕ್ಷಣಾ ಘಟಕಗಳಿಲ್ಲ:

ನೆಲಮಂಗಲ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಕೈಗಾರಿಕೆಗಳು, ಬಡಾವಣೆಗಳು ಇರುವುದರಿಂದ ತಾಲೂಕಿನ ಸಾಕಷ್ಟು ರೈತರು ಭೂಮಿಯನ್ನು ಕಳೆದುಕೊಂಡಿದ್ದಾರೆ. ಅಂತರ್ಜಲ ಮಟ್ಟ ಕುಸಿತ ಸೇರಿ ಹಲವು ಕಾರಣಗಳಿಂದ ಮಾವಿನ ಬೆಳೆ ಪ್ರಮಾಣ ತಾಲೂಕಿನಲ್ಲಿ ಕಡಿಮೆಯಾಗಿದೆ. ಮಧ್ಯಮ ಪ್ರಮಾಣದಲ್ಲಿ ಮಾವು ಬೆಳೆಯುತ್ತಿರುವ ಬೆಳೆಗಾರರಿಗೆ ಮಾರುಕಟ್ಟೆ ಇಲ್ಲದ ಕಾರಣ ಬೆಂಗಳೂರು ನಗರಕ್ಕೆ ಹೋಗಬೇಕು. ಮಾರುಕಟ್ಟೆಗೆ ಹೋಗಲು ಆರ್ಥಿಕ ಸಮಸ್ಯೆ ಇದೆ. ಜತೆಗೆ ಮಾವು ಸಂರಕ್ಷಣಾ ಘಟಕಗಳಿಲ್ಲ. ಮರಗಳನ್ನೇ ಬೇರೆ ಜಿಲ್ಲೆಯ ವ್ಯಾಪಾರಿಗಳಿಗೆ ಮುಂಗಡ ಹಣ ಪಡೆದು, ಗುತ್ತಿಗೆ ನೀಡುತ್ತಿದ್ದಾರೆ. ಇದರಿಂದ ರೈತರು ಲಾಭವಿಲ್ಲದೆ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಚಿಂತೆಪಡುವಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

‘ಈ ಬಾರಿ ಮಾವಿನ ಗಿಡದಲ್ಲಿ ಉತ್ತಮ ಬೆಳೆ ನಿರೀಕ್ಷಿಸಬಹುದಾಗಿದೆ. ಸರ್ಕಾರ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆ ನೀಡಿದರೆ ರೈತರು ಆರ್ಥಿಕವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ. ತಾಲೂಕಿನಲ್ಲಿ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದಿರುವುದರಿಂದ ಬೇರೆ ಕಡೆಯಿಂದ ಬಂದವರಿಗೆ ಮಾವಿನ ತೋಟ ಗುತ್ತಿಗೆ ನೀಡಿ, ಅವರು ನೀಡುವ ಹಣ ಪಡೆಯುವಂತೆ ಆಗಿದೆ.’

ವಿನೋದ್, ಮಾವು ಬೆಳೆಗಾರ‘ನೆಲಮಂಗಲ ತಾಲ್ಲೂಕಿನಲ್ಲಿ ಸುಮಾರು 1700 ಹೆಕ್ಟೇರ್ ಮಾವು ಪ್ರದೇಶವಿದ್ದು, ಮರದ ತುಂಬೆಲ್ಲಾ ಹೂವು ಬಂದಿದ್ದು, ರೋಗ ಬಾರದಂತೆ ಸಂರಕ್ಷಿಸಲು ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ನೀಡುತ್ತಿದ್ದೇವೆ.’

ವಿಜಯಕುಮಾರ್

ಸಹಾಯಕ ನಿರ್ದೇಶಕರು

ತೋಟಗಾರಿಕೆ ಇಲಾಖೆ 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಡಿಎ ಮೈತ್ರಿ ಕೂಟದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
ಪತ್ರಕರ್ತರಿಗೆ ಸ್ಪಂದಿಸುತ್ತಿದ್ದ ಶಾಮನೂರು ಸದಾ ಸ್ಮರಣೀಯ