ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ಬಿಜೆಪಿಯ ಎಲ್ಲ ಕಾರ್ಯಕರ್ತರು ಇಂದಿನಿಂದಲೇ ಸನ್ನದ್ಧರಾಗಬೇಕು. ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂಬ ಸೂಚನೆ ನೀಡಿದ ಬಿಜೆಪಿ ಕಾರ್ಯಕಾರಿಣಿ, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬುವಲ್ಲಿ ಯಶಸ್ವಿಯಾಯಿತು.
ಇಲ್ಲಿನ ಹೆಬಸೂರು ಭವನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ನಡೆಯಿತು. ಚುನಾವಣೆಗೆ ಯಾವ ರೀತಿ ತಯಾರಬೇಕು. ಏನೇನು ತಂತ್ರಗಳನ್ನು ಅನುಸರಿಸಬೇಕು ಎಂಬ ಸೂತ್ರವನ್ನು ನೀಡಿದ ಮುಖಂಡರು, ಪಕ್ಷದಲ್ಲಿದ್ದು ದೂರವಾಗಿರುವ, ಹಳೆಯ ಕಾರ್ಯಕರ್ತರನ್ನು ಮತ್ತೆ ಸೆಳೆಯಬೇಕು ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, "ಇಬ್ಭಾಗವಾಗಿಸಲು ದೇಶ ಇವರಪ್ಪನ ಮನೆ ಆಸ್ತಿಯೇ " ಎಂದು ಸಂಸದ ಡಿ.ಕೆ. ಸುರೇಶ ಹೇಳಿಕೆಗೆ ತಿರುಗೇಟು ನೀಡಿದರು.ಕೇಂದ್ರದಲ್ಲಿ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಾಗಿಯೇ ಈ ರೀತಿಯ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆಲ್ಲ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಹದೆಗೆಟ್ಟಿದೆ. ಆರ್ಥಿಕ ಸ್ಥಿತಿ ನಿಭಾಯಿಸಲು ಸಾಧ್ಯವಾಗದ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಧರಣಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ ಎಂದು ತಿಳಿಸಿದರು.
ಮೊದಲು 74 ವಿಮಾನ ನಿಲ್ದಾಣಗಳಿದ್ದರೆ, ಈಗ 149 ವಿಮಾನ ನಿಲ್ದಾಣಗಳಾಗಿವೆ. ಸದ್ಯದಲ್ಲೇ ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುವುದು. ಕಾಂಗ್ರೆಸ್‌ನ ಕೆ.ಎಚ್. ಮುನಿಯಪ್ಪ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದಾಗ ರಾಜ್ಯದ ರೈಲು ಯೋಜನೆಗಳಿಗೆ ₹700 ಕೋಟಿ ಅನುದಾನ ನೀಡಲಾಗಿತ್ತು. ಈ ವರ್ಷ ಬಿಜೆಪಿ ಸರ್ಕಾರ ₹7500 ಕೋಟಿ ನೀಡಿದೆ ಎಂದರು.
ಮಾಜಿ ಶಾಸಕ, ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಮಾತನಾಡಿ, 6 ತಿಂಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಹುರುಪಿನಲ್ಲಿದ್ದ ಕಾಂಗ್ರೆಸ್‌ಗೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಶಾಕ್ ನೀಡಿದೆ. ಅಯೋಧ್ಯೆ ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಂತರ ಆ ಪಕ್ಷಕ್ಕೆ ಚುನಾವಣೆಯನ್ನೇ ಮರೆಯುವಂತೆ ಮಾಡಿದೆ. ಇದರಿಂದ ಗ್ಯಾರಂಟಿ ಯೋಜನೆ ಬಂದ್ ಮಾಡುವ ಮಾತು ಅವರಿಗೆ ಬರಲಾರಂಭಿಸಿವೆ ಎಂದರು.
ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸಂಜಯ ಕಪಟಕರ ಹಾಲಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅವರಿಗೆ ಧ್ವಜ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಧಾರವಾಡ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶೆಟ್ಟರ್ ಗೈರು
ಗೊಂದಲ ಮರೆಯಿರಿ: ಮಾಜಿ ಸಿಎಂ ಜಗದೀಶ ಶೆಟ್ಟರ ಮರಳಿ ಬಿಜೆಪಿ ಬಂದಿದ್ದಾರೆ. ಪಕ್ಷದಲ್ಲಿನ ಗೊಂದಲ ಮರೆತು ಎಲ್ಲರೂ ಒಟ್ಟಾಗಿ ಬಿಜೆಪಿ ಗೆಲ್ಲಿಸಲು ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಮನೆ ಮನೆಗೆ ತಲುಪಿಸುವ ಜತೆಗೆ ಕಂಡು ಕೇಳರಿಯದ ರೀತಿಯಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಆಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.