ಕುಡಿವ ನೀರಿಗೆ ಸಮಸ್ಯೆಯಾಗದಂತೆ ನಿಗಾ ವಹಿಸಿ: ಸಚಿವ ಬಿ. ನಾಗೇಂದ್ರ

KannadaprabhaNewsNetwork |  
Published : Feb 04, 2024, 01:35 AM IST
ಬಳ್ಳಾರಿಯ ಜಿ.ಪಂ.ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಜಿಲ್ಲಾ ಸಚಿವ ನಾಗೇಂದ್ರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.  | Kannada Prabha

ಸಾರಾಂಶ

ಬೇಸಿಗೆಯಲ್ಲಿ ನೀರಿನ ತೀವ್ರ ತೊಂದರೆ ಅನುಭವಿಸುವ ಹರಗಿನಡೋಣಿ ಹಾಗೂ ಬೆಳಗಲ್ಲು ಗ್ರಾಮಕ್ಕೆ ನೀರು ಪೂರೈಕೆ ಕ್ರಮ ವಹಿಸಬೇಕು ಎಂದು ಸಚಿವ ಬಿ. ನಾಗೇಂದ್ರ ತಿಳಿಸಿದರು.

ಬಳ್ಳಾರಿ: ಬೇಸಿಗೆಯಲ್ಲಿ ಕುಡಿವ ನೀರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಪೂರಕ ಕ್ರಮ ಕೈಗೊಳ್ಳಬೇಕು. ಕುಡಿವ ನೀರಿಗೆ ಅತಿ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳ ಕಡೆ ವಿಶೇಷ ನಿಗಾ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಅವರು, ಬೇಸಿಗೆಯಲ್ಲಿ ನೀರಿನ ತೀವ್ರ ತೊಂದರೆ ಅನುಭವಿಸುವ ಹರಗಿನಡೋಣಿ ಹಾಗೂ ಬೆಳಗಲ್ಲು ಗ್ರಾಮಕ್ಕೆ ನೀರು ಪೂರೈಕೆ ಕ್ರಮ ವಹಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ನೀರಾವರಿ ಇಲಾಖೆ ಅಧಿಕಾರಿಗಳು, ಮುಂದಿನ ಬುಧವಾರದಿಂದಲೇ ಹರಗಿನಡೋಣಿ ಗ್ರಾಮಕ್ಕೆ ನೀರು ಸರಬರಾಜು ಆಗಲಿದೆ. ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ನಾಗೇಂದ್ರ, ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳವಾಗಬೇಕು. ಈ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಸೂಚಿಸಿದರು.

ಜೆಸ್ಕಾಂನ ಜಾಗೃತಿ ದಳದವರು ಗ್ರಾಮೀಣ ಪ್ರದೇಶಗಳ ಮನೆಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುತ್ತಿರುವುದು ಸರಿಯಲ್ಲ. ಮೊದಲಿಗೆ ಎಚ್ಚರಿಕೆ ನೀಡಬೇಕು. ₹10ರಿಂದ 20 ಸಾವಿರ ದಂಡ ಹಾಕಿದರೆ ಕಟ್ಟಲು ಹೇಗೆ ಸಾಧ್ಯ ? ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕು. ದಂಡವೇ ಅಂತಿಮವಾಗಬಾರದು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಕಂಪ್ಲಿ ಜೆ.ಎನ್. ಗಣೇಶ್, ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬೇಸಿಗೆ ವೇಳೆ ಕುಡಿವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಯಾವುದೇ ಕಾರಣ ಹೇಳಬೇಡಿ. ನೀರು ಪೂರೈಕೆ ಸಂಬಂಧ ಮುಂಜಾಗ್ರತೆಯಾಗಿ ಕ್ರಮ ವಹಿಸಿ ಎಂದರಲ್ಲದೆ, "ನೀವು ಏನು ಮಾಡುತ್ತೀರೋ ಗೊತ್ತಿಲ್ಲ. ನನ್ನ ಜನಗಳಿಗೆ ನೀರಿನ ಕೊರತೆಯಾಗಬಾರದು " ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಂಪ್ಲಿ ತಾಲೂಕಿನ ವಿದ್ಯಾರ್ಥಿಗಳು ಬಸ್ ಸೌಲಭ್ಯವಿಲ್ಲದೆ ಒದ್ದಾಡುವಂತಾಗಿದೆ. ಬಸ್‌ ಕೊರತೆಯಿಂದ ಅನೇಕ ಬಾಲಕಿಯರು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಓರ್ವಾಯಿ ಕ್ರಾಸ್‌ ನಲ್ಲಿ ವಿದ್ಯಾರ್ಥಿಗಳನ್ನು ಇಳಿಸಿ ಹೋಗುತ್ತಾರೆ. ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು ಗ್ರಾಮದ ಮಕ್ಕಳು ಅಲ್ಲಿಂದ ನಡೆದುಕೊಂಡು ಹೋಗಬೇಕಾಗಿದೆ. ಮುಖ್ಯ ರಸ್ತೆಯಲ್ಲಿಯೇ ಬಸ್ ನಿಲುಗಡೆಯಾಗುವುದಿಲ್ಲ. ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಜತೆ ಸರಿಯಾಗಿ ವರ್ತಿಸಬೇಕು. ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ತಿದ್ದಿಕೊಳ್ಳಬೇಕು ಎಂದು ಸೂಚಿಸಿದರು. ಸಿರುಗುಪ್ಪ ಶಾಸಕ ನಾಗರಾಜ್ ತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಸಭೆಯಲ್ಲಿ ಬೆಳಕು ಚೆಲ್ಲಿದರು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಅಪರ ಜಿಲ್ಲಾಧಿಕಾರಿ ಮಹ್ಮದ್ ಝುಬೇರ್ ಸಭೆಯಲ್ಲಿದ್ದರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತೋಟಗಾರಿಕೆ ಇಲಾಖೆ ಅಧಿಕಾರಿಗೆ ಶಾಸಕ ಗಣೇಶ್ ತರಾಟೆ

ಕಂಪ್ಲಿ ತಾಲೂಕು ಕೇಂದ್ರಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿ ನಿಯೋಜನೆಗೊಳಿಸಿದರೂ ಕಂಪ್ಲಿಯಲ್ಲಿ ಇರದೆ ಬಳ್ಳಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುರಿತು ಶಾಸಕ ಗಣೇಶ್ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಕಚೇರಿಯಿಲ್ಲ ಎಂಬ ನೆಪವೊಡ್ಡಿ ತಾಲೂಕು ಅಧಿಕಾರಿಯನ್ನು ಬಳ್ಳಾರಿಯಲ್ಲಿಯೇ ಇರಿಸಿಕೊಂಡಿದ್ದೀರಿ. ಪರ್ಯಾಯ ವ್ಯವಸ್ಥೆ ಮಾಡಬೇಕಲ್ಲವೇ? ನಾವಾಗಿ ಕೇಳಿದರೆ ಮಾತ್ರ ಮಾತನಾಡುತ್ತೀರಿ ವಿನಾ, ನಿಮಗೆ ಕಾಳಜಿಯಿಲ್ಲವೇ? ಜನರು ನಿಮ್ಮನ್ನು ಹುಡುಕಿಕೊಂಡು ಜಿಲ್ಲಾ ಕೇಂದ್ರಕ್ಕೆ ಬರಬೇಕಾ ಎಂದು ಶಾಸಕ ಗಣೇಶ್, ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲಿಯೇ ಕಚೇರಿ ಆರಂಭಿಸಲಾಗುವುದು. ತಾತ್ಕಾಲಿಕವಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿ ಇರಲು ಸೂಚಿಸಲಾಗುವುದು ಎಂದು ಉಪ ನಿರ್ದೇಶಕರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ