ಕನ್ನಡಪ್ರಭ ವಾರ್ತೆ ಅರಸೀಕೆರೆ

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಜ್ಞಾನವೆಂಬ ಸಾಗರದಲ್ಲಿ ಅಲೆಗಳಂತೆ ಅಲೆದಾಡಿ ಸಾಧನೆ ಮಾಡುವ ಮಹತ್ವಾಕಾಂಕ್ಷೆ ಇರಬೇಕು. ಶಿಕ್ಷಣವೇ ವ್ಯಕ್ತಿಯ ಬದುಕಿಗೆ ದಿಕ್ಕು ತೋರಿಸುವ ಶಕ್ತಿಯಾಗಿದೆ ಎಂದು ಭಾರತೀಯ ವಾಯುಸೇನೆಯ ಸೈನಿಕರಾದ ಶಿವಕುಮಾರ್ ಸಿ. ಎಸ್ ಹೇಳಿದರು.ತಾಲೂಕಿನ ಕಲ್ಲುಸಾದರಹಳ್ಳಿ ಗ್ರಾಮದಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರೇಯಸ್ ಆಂಗ್ಲ ಮಾಧ್ಯಮ ಶಾಲೆಯ 28ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನವಲ್ಲ, ಅದು ಸಂಸ್ಕೃತಿ, ಮೌಲ್ಯಗಳು ಹಾಗೂ ಚಿಂತನೆಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಸುವ ಮಹತ್ತರ ಪ್ರಕ್ರಿಯೆಯಾಗಿದೆ ಎಂದರು.ಒಂದು ಕಲ್ಲನ್ನು ಕೆತ್ತಿದರೆ ಶಿಲೆಯಾಗಿ ರೂಪುಗೊಳ್ಳುವಂತೆ, ಮಕ್ಕಳಿಗೆ ಸರಿಯಾದ ಸಂಸ್ಕಾರ ಮತ್ತು ಮೌಲ್ಯಗಳನ್ನು ನೀಡಿದರೆ ಅವರು ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಿ ಬೆಳೆದು ನಿಲ್ಲುತ್ತಾರೆ. ಶಿಕ್ಷಣವು ಮಕ್ಕಳಲ್ಲಿ ಶಿಸ್ತು, ತಾಳ್ಮೆ, ಪ್ರೇರಣೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಬೇಕು. ತಂದೆತಾಯಿ ಮತ್ತು ಗುರುಗಳಿಗೆ ಗೌರವ ತೋರಿಸುವ ಗುಣವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಜೊತೆಗೆ ನಮ್ಮ ಪರಂಪರೆ, ಇತಿಹಾಸ, ಸಮಾಜ ಮತ್ತು ಭಾಷೆಯನ್ನು ಅರಿತುಕೊಂಡು ಅದನ್ನು ಬಳಸುವ ಹಾಗೂ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಬಗ್ಗೆ ಪ್ರೀತಿ ಮತ್ತು ಜವಾಬ್ದಾರಿಯ ಅರಿವು ವಿದ್ಯಾರ್ಥಿ ಜೀವನದಲ್ಲೇ ಮೂಡಬೇಕು ಎಂದು ಅವರು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಸಚಿನ್ ಬಿ. ಎಸ್ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯಿಂದ ಹೊರಬರಬೇಕಾದ ಅಗತ್ಯವಿದೆ ಎಂದು ಎಚ್ಚರಿಸಿದರು. ಮೊಬೈಲ್‌ಗಳ ದುರುಪಯೋಗದಿಂದ ಮಕ್ಕಳ ಸಮಯ ಮಾತ್ರವಲ್ಲದೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಹಾನಿಯಾಗುತ್ತಿದೆ ಎಂದರು.ಮೊಬೈಲ್ ಅನ್ನು ಮನರಂಜನೆಗಾಗಿ ಅಲ್ಲದೆ, ಜ್ಞಾನಾರ್ಜನೆ ಮತ್ತು ಮಾಹಿತಿ ಪಡೆಯುವ ಸಾಧನವಾಗಿ ಬಳಸಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತುಕೊಂಡು ವಿವಿಧ ಇಲಾಖೆಗಳು ಹಾಗೂ ಕ್ಷೇತ್ರಗಳಲ್ಲಿ ಸಾಧನೆ ಮಾಡುವತ್ತ ಮುಂದಾಗಬೇಕು. ಶಿಕ್ಷಣದ ಮೂಲಕವೇ ಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಯಾದ ರಾಧಾ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ವಾರ್ಷಿಕೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು.