ಹಲಗೂರು: ಒತ್ತಡ ಜೀವನದ ನಡುವೆ ಹುಟ್ಟೂರು ಮತ್ತು ಹೆತ್ತವರನ್ನೇ ದೂರ ಇಡುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಅಕ್ಷರ ಕಲಿಸಿದ ಗುರುಗಳನ್ನು ನೆನಪು ಮಾಡಿಕೊಳ್ಳುವ ಜೊತೆಗೆ ಗೌರವ ಭಾವದಿಂದ ನಡೆದುಕೊಳ್ಳುವ ಹಿರಿಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಶಿವಮೂರ್ತಿ ತಿಳಿಸಿದರು. ಡಿ.ಹಲಸಹಳ್ಳಿ ಗೇಟ್ ಬಳಿಯ ಶ್ರೀಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಂಗಮ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ಸಿ.ರಾಮಲಿಂಗಯ್ಯ ಮಾತನಾಡಿ, ಮನುಷ್ಯ ಬದುಕಿನಲ್ಲಿ ಗುರು ಮತ್ತು ಗುರಿ ಇದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಗುರು- ಹಿರಿಯರ ಮಾತು ಕೇಳಿದರೆ ಜೀವನದಲ್ಲಿ ಒಳ್ಳೆಯದೇ ಆಗುತ್ತದೆ. ಎಲ್ಲರೂ ಸರ್ಕಾರಿ ನೌಕರರೇ ಆಗಬೇಕೆಂಬ ನಿಯಮವಿಲ್ಲ. ಕೊನೆಯ ಸಾಲಿನಲ್ಲಿ ಕುಳಿತು ಕಲಿತವರು ಆಡಳಿತ ಚುಕ್ಕಾಣಿ ಹಿಡಿದು ಉತ್ತಮ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದರು. ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ವಿವಿಧ ಶಾಲೆಗಳಿಗೆ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಹಿರಿಯ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಶಿವಮೂರ್ತಿ, ಋಷಭೇಂದ್ರ ಪ್ರಸಾದ್, ಎಂ.ಮನೋಹರ್, ಎಲ್.ಶಿವನಂಜಮಣಿ, ಪ್ರಸನ್ನ, ರಾಜಶೇಖರ್, ಜಯರಾಮು, ಮೋಕ್ಷ ಮಹದೇವ ಪ್ರಸಾದ್, ಉಮಾ ಶಂಕರ್, ಮುರುಡೇಶ್, ಮಹದೇವಸ್ವಾಮಿ, ಕುಮಾರಿ ಸೇರಿ 2006- 2008 ಮತ್ತು 2008- 2011ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.