ನಿತ್ಯಾಧಾರ ಮಾತೆ ಚರ್ಚಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಪೌಲ್ ಡಿಸೋಜ ಮಾಹಿತಿ
ಸಮಸ್ತ ಕ್ರೈಸ್ತ ಬಾಂಧವರಿಗೆ ೨೦೨೫ರ ಈ ವರ್ಷ ಪ್ರಭು ಯೇಸುಕ್ರಿಸ್ತರ ಜನನದ ಜ್ಯೂಬಿಲಿ ವರ್ಷವಾಗಿರುತ್ತದೆ. ಸುಮಾರು ೨೦೨೫ ವರ್ಷಗಳ ಹಿಂದೆ ಕ್ರೈಸ್ತರು ಆರಾಧಿಸಿ, ಪೂಜಿಸುವ ದೇವರಾದ ಪ್ರಭು ಯೇಸುಕ್ರಿಸ್ತರು ಮಾನವರಾಗಿ ಜನಿಸಿದ ಘಟನೆಯೇ ಕ್ರಿಸ್ಮಸ್ ಅಥವಾ ಕ್ರಿಸ್ತ ಜಯಂತಿ ಎಂದು ಬಾಳೆಹೊನ್ನುರು ವಲಯದ ವಿಜಯಮಾತೆ ದೇವಾಲಯ ಪ್ರಧಾನ ಗುರು ಪೌಲ್ ಡಿಸೋಜ ತಿಳಿಸಿದರು.
ಸೋಮವಾರ ನಿತ್ಯಾಧಾರ ಮಾತೆ ಚರ್ಚಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿ ವಿಶ್ವದ ಎಲ್ಲಾ ಕ್ರೈಸ್ತರು ಪ್ರತೀ ವರ್ಷ ಡಿ. ೨೫ ರಂದು ಈ ಹಬ್ಬಆಚರಿಸುತ್ತಾರೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಪ್ರಭು ಯೇಸು ಜನಿಸಿದ ಗೋದಲಿಯನ್ನು ಕ್ರೈಸ್ತರ ಮನೆ ಹಾಗೂ ಚರ್ಚುಗಳಲ್ಲಿ ನಿರ್ಮಿಸಿ, ನಕ್ಷತ್ರ, ಕ್ರಿಸ್ ಮಸ್ ಟ್ರೀ(ಮರ) ಹಾಗು ಇತರೆ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿ, ಸಿಹಿ ತಿನಿಸು ಮತ್ತು ಉಡುಗೊರೆಗಳನ್ನು ಪರಸ್ಪರ ಹಂಚುತ್ತಾ, ಬಡಬಗ್ಗರಿಗೆ ದಾನಧರ್ಮ ಮಾಡುತ್ತಾ ಸಂಭ್ರಮಿಸುತ್ತಾರೆ.ಈ ವರ್ಷ ಜ್ಯೂಬಿಲಿ ವರ್ಷವಾಗಿರುವುದರಿಂದ ಆಚರಣೆಯನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಲು ತಿರ್ಮಾನಿಸಿದ್ದು ಈ ಪ್ರಯುಕ್ತ ಡಿ.೨೧ ರ ಭಾನುವಾರ ೩ ಗಂಟೆಯಿಂದ ಕೊಪ್ಪ ಮೇಲಿನಪೇಟೆ ಕುವೆಂಪು ವೃತ್ತ ದಿಂದ ಸೌಹಾರ್ದ ರ‍್ಯಾಲಿ ( ಮೆರವಣಿಗೆ )ನಡೆಯಲಿದೆ. ಚಿಕ್ಕಮಗಳೂರು ಧರ್ಮಕ್ಷೇತ್ರದ ಕಾರ್ಯ ವ್ಯಾಪ್ತಿಯಲ್ಲಿ ವಲಯಗಳಿದ್ದೂ, ನಮ್ಮ ಬಾಳೆಹೊನ್ನೂರು ವಲಯಕ್ಕೆ ಸೇರಿದ ೧೪ ಧರ್ಮಕೇಂದ್ರಗಳ (ಚರ್ಚುಗಳ) ಗುರುಗಳು, ಕನ್ಯಾ ಸಹೋದರಿಯರು ಹಾಗೂ ಭಕ್ತಾದಿಗಳ ನೇತೃತ್ವ ದಲ್ಲಿ ಇತರ ಕ್ರೈಸ್ತರೊಂದಿಗೆ, ಕೊಪ್ಪದ ತೀರ್ಥಹಳ್ಳಿ ವೃತ್ತದಿಂದ ಪ್ರಭು ಯೇಸುಕ್ರಿಸ್ತರ ಜನನ, ಜೀವನ ಹಾಗೂ ತ್ಯಾಗ ನೆನಪಿ ಸುವ ಸ್ಥಬ್ಧ ಚಿತ್ರಗಳೊಂದಿಗೆ ಮುಖ್ಯರಸ್ತೆಗಳಲ್ಲಿ ಪ್ರಾರ್ಥನಾ ಮೆರವಣಿಗೆ ಸಾಗಿ, ನಂತರ ಚರ್ಚ್ ಮುಂಭಾಗದ ಮೈದಾನ ದಲ್ಲಿ ಕ್ರಿಸ್‌ಮಸ್ ಸೌಹಾರ್ದ ವೇದಿಕೆ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಹೇಳಿದರು.ಸಮಸ್ತ ಜನತೆಗೆ ಶಾಂತಿ-ಪ್ರೀತಿಯ ಸಂದೇಶ ಸಾರುವ ಕಾರ್ಯಕ್ರಮ. ಇದರಲ್ಲಿ ಚಿಕ್ಕಮಗಳೂರು ಧರ್ಮಾಧ್ಯಕ್ಷ ಡಾ. ಓ. ಅಂತೋಣಿಸ್ವಾಮಿ, ಶೃಂಗೇರಿ ಆದಿಚುಂಚನಗಿರಿ ಮಠದ ಶ್ರೀ ಗುಣನಾಥ ಸ್ವಾಮೀಜಿ, ಮಂಗಳೂರಿನ ಮುಸ್ಲಿಂ ಮುಖಂಡ ಜ.ಮೊಹಮ್ಮದ್ ಕುಂಞ ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಬಾಳೆಹೊನ್ನೂರು ವಲಯದ ಎಲ್ಲಾ ಧರ್ಮ ಕೇಂದ್ರಗಳ ಧರ್ಮಗುರುಗಳ, ಧರ್ಮಭಗಿನಿಯರ ಹಾಗೂ ಭಕ್ತಜನತೆ ಪರವಾಗಿ ವಿನಂತಿಸುತ್ತೇನೆ ಎಂದರು.ಬಾಳೆಹೊನ್ನುರು ವಲಯದ ಕಾರ್ಯದರ್ಶಿ, ಕಡಬಗೆರೆ ಸಂತಪಾಲರ ದೇವಾಲಯದ ವಂದನಿಯ ಗುರು ಮಾರ್ಸಲ್ ಪಿಂಟೋ, ಕೊಪ್ಪ ನಿತ್ಯಾಧಾರ ಮಾತೆ ದೇವಾಲಯದ ಧರ್ಮಗುರು ಮೆಲ್ವಿನ್ ಟೆಲ್ಲಿಸ್, ಸಹಾಯಕ ಗುರು ಕೀರ್ತಿ ಕಿರಣ್ ಮುಂತಾದವರು ಇದ್ದರು.