ಗಂಗಾಧರ.ಎಂ.ಹಿರೇಮಠ
ದಕ್ಕಿದ ನೆಲದ ಉಳುಮೆ ಮಾಡುವ ರೈತ ದೇಶಕ್ಕೆ ಅನ್ನ ನೀಡಿದರೆ, ಈ ಸರ್ಕಾರಿ ಕೃಷಿಕ (ಅರಣ್ಯಧಿಕಾರಿ) ಸರ್ಕಾರದ ಬರದ ನೆಲಕ್ಕೆ ಹಸಿರು ಬೀಜ ನೆಟ್ಟು ಉಸಿರು ತುಂಬಿದ್ದಾರೆ. ಎಲ್ಲರನ್ನು ಕೈ ಬೀಸಿ ಕರೆಯುವ ಆಲಮಟ್ಟಿಯ ಹಸಿರೋದ್ಯಾನಗಳ ಭೂರಮೆಗೆ ಬೆರಗಾಗದವರೇ ಇಲ್ಲ. ಇಂತಹ ಪರಿಸರ ಕಾಳಜಿ ಮತ್ತು ಸಾಹಾಸಮಯ ಸಾಧನೆಗೆ ಹೆಸರಾದವರೇ ಕೃಷ್ಣಾಭಾಗ್ಯ ಜಲ ನಿಗಮ (ಕೆಬಿಜೆಎನ್ಎಲ್) ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಅವರ ಎರಡುವರೇ ದಶಕದ ಪರಿಶ್ರಮವಿದೆ.
2000ರಲ್ಲಿ ಆಲಮಟ್ಟಿಯ ಕೃಷ್ಣಾಭಾಗ್ಯ ಜಲನಿಗಮದ ಅರಣ್ಯ ವಿಭಾಗ ಆರ್‌ಎಫ್ಒ ಆಗಿ ಕೆಲಸ ಆರಂಭಿಸಿದ ಮಹೇಶ ಪಾಟೀಲ ಆ ವೇಳೆಗೆ ಡಾ.ಎಸ್.ಎಂ.ಜಾಮದಾರ್ ನೇತೃತ್ವದಲ್ಲಿ ಆಲಮಟ್ಟಿ ಸುಂದರೀಕರಣ ಸಮಿತಿ ರಚನೆಯಾಗಿತ್ತು. ಈ ಸಮಿತಿ ಸದಸ್ಯರಾಗಿ ಬಿಡಿಎಲ್ ಕೃಷ್ಣಾ.ಡಿ. ಉದುಪುಡಿ ಅವರೊಂದಿಗೆ ಮಹೇಶ ಪಾಟೀಲ ನೇಮಕವಾಗಿದ್ದು ಪಾಟೀಲರ ಹಸಿರು ಕಾಳಜಿಗೆ ಮುನ್ನುಡಿಯಾಯಿತು. ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಗಾರ್ಡನ್‌ಗಳ ನಿರ್ಮಾಣದ ಜವಾಬ್ದಾರಿ ಹೊತ್ತು ಅಲ್ಲಿಂದ ಶುರುವಾದ ಪರಿಸರ ಕಾಯಕ ಇನ್ನೂ ಮುಂದುವರಿದಿದೆ. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವಂತೆ ಅರಣ್ಯಧಿಕಾರಿ ಮಹೇಶ ಪಾಟೀಲ ತಮ್ಮ ಪರಿಸರ ಪ್ರಜ್ಞೆ ಜೊತೆಗೆ ಹಸಿರು ಪ್ರೀತಿಯನ್ನೂ ಮೆರೆದಿರುವುದು ಅಪರೂಪ.ವಿಜಯಪುರ- ಆಲಮಟ್ಟಿ ಜಲಾಶಯ ವ್ಯಾಪ್ತಿ ವಿಜಯಪುರ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಲ್ಲಿ ಸುಂದರ ವೃಕ್ಷೋದ್ಯಾನಗಳು ಮೈದಳೆದಿದ್ದು, ಭಣಭಣ ವಾತಾವರಣ ನೋಡುತ್ತಿದ್ದ ಜನತೆಯನ್ನೀಗ ಹಸಿರು ಸೊಬಗನ್ನು ಕಣ್ತುಂಬಿಕೊಳ್ಳುವಂತಾಗಿದೆ. ಅದರಲ್ಲೂ ಆಲಮಟ್ಟಿಯ ಭೂರಮೆ ನೋಡೋದೆ ವಿಸ್ಮಯ. ಇಂಥ ಸುಂದರ ಪರಿಸರ ನಿರ್ಮಾಣದ ಹಿಂದೆ ಪಾಟೀಲರ ಸತತ ಪರಿಸರ ಪ್ರೇಮ ಹಾಗೂ ಪರಿಶ್ರಮ ಅಡಗಿದೆ.
ಯಾವ್ಯಾವ ಗಾರ್ಡನ್ ಕಂಗೊಳಿಸುತ್ತಿವೆ:
ಆಲಮಟ್ಟಿಯಲ್ಲಿ 2000 ದಿಂದ 2005 ರವರೆಗೆ, 2006 ರಿಂದ 2008 ರವರೆಗೆ, ಮತ್ತೆ 2016 ರಿಂದ ಇಲ್ಲಿವರೆಗೆ ನಿರಂತರವಾಗಿ 15 ವರ್ಷಗಳ ಸೇವೆಯಲ್ಲಿ ವಿಶಿಷ್ಠ, ವಿಶೇಷ ವೃಕ್ಷೋದ್ಯಾನಗಳ ನಿರ್ಮಾಣ ಯೋಜನೆಗೆ ಸ್ಪಷ್ಟ ಚಿತ್ರಣ ಸಿಕ್ಕಿತು. 2005 ಹಗೂ 2008 ರಿಂದ 2011 ರವರೆಗೆ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಬೆಳಗಾವಿಯಲ್ಲೂ ವಾಟರ್ಶೆಡ್ ವಿಭಾಗದಲ್ಲಿ ಕೆಲದಿನ ಕಾರ್ಯ ನಿರ್ವಹಿಸಿದರು. 2016ರಲ್ಲಿ ಪುನಃ ಆಲಮಟ್ಟಿಗೆ ಬಂದು ಕಾರ್ಯ ನಿರ್ವಹಿಸುತ್ತಿರುವ ಮಹೇಶ ಪಾಟೀಲ, ಇಲ್ಲಿನ ಗಾರ್ಡನ್‌ಗಳಿಗೆ ಹೊಸ ಸ್ಪರ್ಶ, ಹೆಚ್ಚಿನ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯಕ್ಕೆ ಮುಂದಾಗಿ ಸೈ ಎನಿಸಿಕೊಂಡಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳ ಪೈಕಿ ಬೃಹತ್ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಸರಿದೂಗಿಸಲು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕೃಷ್ಣಾಭಾಗ್ಯ ಜಲ ನಿಗಮದಲ್ಲಿ 1996 ರಿಂದ ಪ್ರತ್ಯೇಕ ಅರಣ್ಯ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಅರಣ್ಯ ಪ್ರದೇಶವನ್ನು ಸಾಧ್ಯವಾದಷ್ಟು ಮರು ಸೃಷ್ಟಿಸಬೇಕೆಂಬ ಪ್ರಯತ್ನದ ಫಲವಾಗಿಯೇ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಮತ್ತು ಅಚ್ಚುಕಟ್ಟು ಪ್ರದೇಶಗಳಲ್ಲಿ ಮತ್ತು ಪುನರ್ ವಸತಿ ಕೇಂದ್ರಗಳಲ್ಲಿ, ನವನಗರ ಬಾಗಲಕೋಟೆಯಲ್ಲಿ ಸಾಕಷ್ಟು ಪ್ರಮಾಣದ ನೆಡುತೋಪುಗಳೊಂದಿಗೆ ಆಲಮಟ್ಟಿಯಲ್ಲಿ 4 ಬೃಹತ್ ವೃಕ್ಷೋದ್ಯಾನಗಳು ನಿರ್ಮಾಣಗೊಂಡಿವೆ. ಇದರ ಹಿಂದೆ ಅರಣ್ಯ ವಿಭಾಗದ ಅದರಲ್ಲೂ ಮಹೇಶ ಪಾಟೀಲರ ಛಲ ಪರಿಶ್ರಮ ಇದೆ.