ಉಡುಪಿ ಕೃಷ್ಣ ಮಠ ರಾಜಾಂಗಣದಲ್ಲಿ ವಿಶ್ವಶಾಂತಿ ಸಮ್ಮೇಳನ ಉದ್ಘಾಟನೆ
ಪರ್ಯಾಯ ಶ್ರೀಗಳು ಜ. ಅಬ್ದುಲ್ ನಜೀರ್ ಮತ್ತು ಮಧುಸೂದನ ಸಾಯಿ ಅವರನ್ನು ಸನ್ಮಾನಿಸಿದರು. ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಲೇಖನಗಳ ಸಂಗ್ರಹ ‘ಸರ್ವಮೂಲಭಾವಪರಿಚಯ’, ಶ್ರಿ ಸುಜ್ಞಾನ ತೀರ್ಥ ಶ್ರೀಪಾದ ವಿರಚಿತ ‘ಗೀತಾಮೃತ ಸಾರ’ ಡಾ.ಚೂಡಾಮಣಿ ನಂದಗೋಪಾಲ್ ಮತ್ತು ಡಾ.ಅರುಣಾ ಕೆ.ಆರ್. ವಿರಚಿತ ‘ಉಡುಪಿ ಶ್ರೀಕೃಷ್ಣ ಮಠ ದೇವಾಲಯದ ಸಂಸ್ಕೃತಿ ಸಿರಿ’ ಕೃತಿಗಳನ್ನು ಅನಾವರಣಗೊಳಿಸಲಾಯಿತು. ಕೃತಿಕಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಿಲಿಜನ್ ಫಾರ್ ಪೀಸ್‌ನ ಪ್ರಧಾನ ಕಾರ್ಯದರ್ಶಿ ಡಾ. ವಿಲಿಯಂ ಎಫ್. ವಂಡ್ಲೆ, ಚಿಕ್ಕಬಳ್ಳಾಪುರದ ಸತ್ಯಸಾಯಿ ಲೋಕಸೇವಾ ಗುರುಕುಲಂನ ಕುಲಪತಿ ಬಿ. ಎನ್. ನರಸಿಂಹಮೂರ್ತಿ, ಗೋಮತಿ ನಾದನ್, ಸುರೇಶ್ ಪುತ್ತಿಗೆ ವೇದಿಕೆಯಲ್ಲಿದ್ದರು.ಬರಹಗಾರ ರೋಹಿತ್ ಚಕ್ರತೀರ್ಥ ಮತ್ತು ನಿಟ್ಟೆ ವಿ.ವಿ.ಯ ಪ್ರಾಧ್ಯಾಪಕ ಸುಧೀರ್‌ರಾಜ್ ಶೆಟ್ಟಿ ನಿರೂಪಿಸಿದರು.
ಕೃಷ್ಣ ಮೊದಲ ಶಾಂತಿ ಸ್ಥಾಪಕ: ಪುತ್ತಿಗೆ ಶ್ರೀಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು, ಸಜ್ಜನರ ರಕ್ಷಣೆಯಾಗಬೇಕು, ಅದಕ್ಕೆ ದುರ್ಜನರ ಶಿಕ್ಷೆಯಾಗಬೇಕು ಎನ್ನುವುದು ಶ್ರೀ ಕೃಷ್ಣನ ಮೊತ್ತಮೊದಲ ಘೋಷಣೆಯಾಗಿದೆ. ಸಜ್ಜನರ ರಕ್ಷಣೆಯಾದರೇ ಮಾತ್ರ ಜಗತ್ತಿನಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ, ಅದಕ್ಕಾಗಿ ಕೃಷ್ಣ ಮಹಾಭಾರತ ಯುದ್ಧ ಮಾಡಿಸಿದ ಮತ್ತು ದುರ್ಜನರನ್ನು ನಾಶ ಮಾಡಿದ. ಆದ್ದರಿಂದ ಕೃಷ್ಣ ಜಗತ್ತಿನ ಮೊದಲ ಶಾಂತಿ ಸ್ಥಾಪಕ. ಕೃಷ್ಣನ ಈ ಶಾಂತಿ ಸಂದೇಶವನ್ನು ಜಗತ್ತಿಗೆ ತಲುಪಿಸುವುದಕ್ಕಾಗಿ ಈ ಸಮ್ಮೇಳನವನ್ನು ಆಯೋಜಿಸಿದ್ದೇವೆ ಎಂದರು.
ವೇದಗಳು ವಿಶ್ವದ ಸಂಪತ್ತು: ಜ. ನಜೀರ್
ಭಾರತೀಯರು ವೇದಗಳ ಬೇರುಗಳ ಅಧಾರದಲ್ಲಿ ಒಂದಾಗಿ ನಿಂತಿದ್ದೇವೆ, ವೇದಗಳು ಎಂದರೆ ಕೇವಲ ಧಾರ್ಮಿಕ ಗ್ರಂಥಗಳಲ್ಲ, ಅವು ಭಾರತೀಯ ನಾಗರಿಕತೆಯ ಬೌದ್ಧಿಕ, ಸಾಂಸ್ಕೃತಿಕ ಮತ್ತು ತಾತ್ವಿಕ ಅಡಿಪಾಯಗಳಾಗಿವೆ, ವೇದಗಳು ನಮ್ಮ ಆತ್ಮಗಳಾಗಿವೆ, ನಮ್ಮನ್ನು ಒಂದಾಗಿ ಹಿಡಿದಿಟ್ಟಿವೆ, ಭಾರತೀಯ ಸಾಹಿತ್ಯ, ಕಲೆ, ವಿಜ್ಞಾನ, ಸಂಸ್ಕೃತಿ, ಪರಂಪರೆ, ತತ್ವಜ್ಞಾನಗಳು ವೇದದಿಂದಲೇ ಹುಟ್ಟಿವೆ. ವೇದಗಳು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಅವು ವಿಶ್ವದ ಸಂಪತ್ತಾಗಿವೆ ಎಂದು ಜ. ಅಬ್ದುಲ್ ನಜೀರ್ ವಿಶ್ಲೇಷಿಸಿದರು.