ಬಾದನಹಟ್ಟಿ ಪಂಪನಗೌಡ
ತಾಲೂಕಿನ ಹಾವಿನಹಾಳು, ಗೆಣಿಕೆಹಾಳ್, ಎಚ್. ವೀರಾಪುರ, ಸೋಮಲಾಪುರ, ಏಳುಬೆಂಚೆ, ಕೆರೆಕೆರೆ, ಕಲ್ಲುಕಂಭ, ಬಾದನಹಟ್ಟಿ, ಸಿದ್ದಮ್ಮನಹಳ್ಳಿ, ಎರೆಂಗಳಿಗಿ, ವದ್ದಟ್ಟಿ, ದಮ್ಮೂರು, ಕೋಳೂರು, ಬೈಲೂರು, ಸಿಂದಿಗೇರಿ, ಸೋಮಸಮುದ್ರ ಹಾಗೂ ಮುಷ್ಟಗಟ್ಟೆ ಸೇರಿದಂತೆ 15 ಗ್ರಾಮಗಳ ಜನ ಶುದ್ಧ ಕುಡಿಯುವ ನೀರಿಲ್ಲದೇ ಪರಿತಪಿಸಬೇಕಾಗಿದೆ. ಈ ಗ್ರಾಮಗಳಲ್ಲಿ ಘಟಕ ಇದ್ದು ಇಲ್ಲದಂತಾಗಿದೆ. ಘಟಕಗಳ ನಿರ್ವಹಣೆ ಕುರಿತಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿದರೆ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಗ್ರಾಪಂ ವ್ಯಾಪ್ತಿಗೆ ಬರುವುದಿಲ್ಲ. ಗುತ್ತಿಗೆ ಪಡೆದ ಏಜೆನ್ಸಿಯವರು ನಿರ್ವಹಿಸಬೇಕು ಎಂದು ಹಾರಿಕೆ ಉತ್ತರ ನೀಡುತ್ತಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಇಂದೂಧರ ಅವರ ಗಮನಕ್ಕೆ ತಂದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.
ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 10 ಶುದ್ಧ ಕುಡಿವ ನೀರಿನ ಸ್ಥಾಪಿಸಲಾಗಿದೆ. ಆದರೆ, ಕೆಲವನ್ನೂ ಇಂದಿಗೂ ಉದ್ಘಾಟನೆ ಮಾಡಿಲ್ಲ. ಅವುಗಳಲ್ಲಿ 5 ಕಾರ್ಯ ನಿರ್ವಹಿಸದೇ ನಿರುಪಯುಕ್ತವಾಗಿವೆ. ಪಟ್ಟಣದಲ್ಲಿ 21 ಸಾವಿರ ಜನಸಂಖ್ಯೆ ಇದ್ದರೂ ಸಂಬಂಧಿಸಿದವರು ನಿರ್ಲಕ್ಷ್ಯ ತೊರಿರುವುದು ವಿಷಾದನೀಯ ಸಂಗತಿಯಾಗಿದೆ.ವಿವಿಧ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸದ ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಇಲ್ಲಿನ ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮದಲ್ಲಿರುವ ಎರಡೂ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿವೆ. ವಾರ್ಡ್‌ನಲ್ಲಿ ಜನರು ಕುಡಿಯುವ ನೀರು ಸರಬರಾಜು ಕುರಿತು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಜಿಲ್ಲಾಡಳಿತದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಶುದ್ದ ಕುಡಿಯುವ ನೀರನ್ನು ಪುರೈಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎನ್ನುತ್ತಾರೆ ಹಾವಿನಹಾಳು ಗ್ರಾಪಂ ಸದಸ್ಯ ಎಚ್. ಮಹೇಶ್.ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವು ಗ್ರಾಪಂಗೆ ಸೇರಿವೆ. ಈ ವರೆಗೂ ಘಟಕ ಸ್ಥಗಿತವಾಗಿರುವ ಬಗ್ಗೆ ದೂರು ಬಂದಿಲ್ಲ. ಬಂದರೆ ಸರಿಪಡಿಸಲಾಗುವುದು ಎನ್ನುತ್ತಾರೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರಾಮಚಂದ್ರಪ್ಪ.