ಕಂಪ್ಲಿ: ಪಟ್ಟಣದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ನವೋದಯ ಜವಾಹರ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದ ಆಯ್ಕೆ ಪರೀಕ್ಷೆ ಶನಿವಾರ ಶಾಂತಿಯುತವಾಗಿ ನಡೆಯಿತು. ಆದರೆ ಪರೀಕ್ಷೆ ಮುಗಿದ ನಂತರ ನಕಲು ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಪರೀಕ್ಷೆ ಬರೆದ ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ ಘಟನೆ ಬೆಳಕಿಗೆ ಬಂದಿದೆ.
ನಕಲು ನಡೆದಿದೆ ಎಂಬ ಆರೋಪ:
ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೇಂದ್ರದ ಆವರಣದಲ್ಲಿ ಸೇರಿದ್ದ ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು, ಪರೀಕ್ಷಾ ಕೋಣೆಯಲ್ಲಿ ನಕಲು ನಡೆದಿದೆ ಎಂದು ಆರೋಪಿಸಿದರು. ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಸಂಬಂಧಿಸಿದ ಕೆಲ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿ ಟಿಕ್ ಹಾಕಿಕೊಡಲಾಗಿದೆ. ಇದರಿಂದ ನಿಷ್ಠೆಯಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಪೋಷಕರಾದ ಎಂ. ಸಂತೋಷಕುಮಾರ್, ಬೆಳಗೋಡ್ ವೀರೇಶ್, ರಾಮಪ್ಪ, ಮಾದಾಪುರದ ಯು. ಮಲ್ಲಿಕಾರ್ಜುನ, ಕೆ. ಬಸವರಾಜ ಸೇರಿದಂತೆ ಪರೀಕ್ಷೆ ಬರೆದ ಕೆಲ ವಿದ್ಯಾರ್ಥಿಗಳು ಆಗ್ರಹಿಸಿದರು. ಅಲ್ಲದೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ (ಯುವಸೇನಾ) ರಾಜ್ಯ ಉಪಾಧ್ಯಕ್ಷ ದುರ್ಗೇಶ್, ಡಿಎಸ್‌ಎಸ್ (ಕೃಷ್ಣಪ್ಪ ಬಣ) ನಗರ ಅಧ್ಯಕ್ಷ ಎಚ್. ಶ್ರೀನಿವಾಸ, ಉಪಾಧ್ಯಕ್ಷ ಪಿ. ಶಂಭುಲಿಂಗ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರೂ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದರು.ಅಧಿಕಾರಿಗಳ ಸ್ಪಷ್ಟನೆ:
ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿತ್ತು. ಅನ್ಯರು ಯಾರೂ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ನಕಲು ನಡೆದಿದೆ ಎನ್ನುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸಿಎಲ್‌ಒ ರಾಮಚಂದ್ ಜೋಯಾ ಹಾಗೂ ಅಧೀಕ್ಷಕ ಬಸವರಾಜ ಪಾಟೀಲ್ ಸ್ಪಷ್ಟಪಡಿಸಿದರು.