ಕಾಲದ ಚಕ್ರ ಉರುಳಿ 20 ವರ್ಷಗಳು ಕಳೆದರೂ, ಗುರು-ಶಿಷ್ಯರ ನಡುವಿನ ಪ್ರೀತಿ, ಗೌರವ ಮತ್ತು ಆತ್ಮೀಯತೆ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ ಎಂಬುದಕ್ಕೆ ಗುರುವಂದನಾ ಕಾರ್ಯಕ್ರಮ ಸಾಕ್ಷಿಯಾಯಿತು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಾಲದ ಚಕ್ರ ಉರುಳಿ 20 ವರ್ಷಗಳು ಕಳೆದರೂ, ಗುರು-ಶಿಷ್ಯರ ನಡುವಿನ ಪ್ರೀತಿ, ಗೌರವ ಮತ್ತು ಆತ್ಮೀಯತೆ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ ಎಂಬುದಕ್ಕೆ ಗುರುವಂದನಾ ಕಾರ್ಯಕ್ರಮ ಸಾಕ್ಷಿಯಾಯಿತು.
ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2006-7ನೇ ಸಾಲಿನ ಪ್ರೌಢಶಾಲಾ (ಇ) ವಿಭಾಗದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ಪುಷ್ಪವೃಷ್ಟಿಗೈದು ಶಿಕ್ಷಕರನ್ನು ವೇದಿಕೆಗೆ ಬರಮಾಡಿಕೊಂಡರು.
ಒಂದೇ ಶಾಲೆಯ ಆವರಣದಲ್ಲಿ ಕಲಿತು, 20 ವರ್ಷಗಳ ನಂತರ ಮತ್ತೆ ಒಂದೇ ವೇದಿಕೆಯಲ್ಲಿ ಸೇರಿ, ಶಾಲೆಯಲ್ಲಿ ಕಳೆದ ತಮ್ಮ ಬಾಲ್ಯದ ಸಿಹಿ-ಕಹಿ ನೆನಪುಗಳನ್ನು ವಿದ್ಯಾರ್ಥಿಗಳು ಮೆಲುಕು ಹಾಕುವ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡರು.
ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕರು, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಹಮತ, ಭಾಂದವ್ಯ ಎಂಬುದು ಕಷ್ಟದ ಮಾತು, ಈ ನಡುವೆಯೂ ಗುರುಗಳ ಮೇಲಿನ ಪ್ರೀತಿ ಇಟ್ಟು ಕಾರ್ಯಕ್ರಮ ರೂಪಿಸಿರುವುದು ನಿಜಕ್ಕೂ ಶ್ಲಾಘನೀಯ. ಹಳೆಯ ವಿದ್ಯಾರ್ಥಿಗಳಲ್ಲಿರುವ ಗುರು - ಶಿಷ್ಯರ ನಡುವಿನ ಭಾಂದವ್ಯ, ಮೌಲ್ಯಗಳು ಇಂದಿನ ಜೇನ್ ಜ್ಹೀ ಪೀಳಿಗೆಯಲ್ಲಿ ಕಾಣಲು ಸಾಧ್ಯವಿಲ್ಲ. ಸಂಸ್ಕೃತಿ, ಸಂಸ್ಕಾರ ಇಲ್ಲದ ಇಂದಿನ ವಿದ್ಯಾರ್ಥಿಗಳಲ್ಲಿ ಇದನ್ನು ನಿರೀಕ್ಷಿಸಲೂ ಆಗುವುದಿಲ್ಲ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಶಿಕ್ಷಕರು ಪಾಠ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾತ್ವಿಕ ಆಲೋಚನೆಗಳ ಮೂಲಕ ಬದುಕು, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಎಲ್ಲ ವೃತ್ತಿಗಳಿಗೂ ತನ್ನದೇಯಾದ ಗೌರವ ಇದೆ, ಆದರೆ ಪ್ರಾಮಾಣಿಕವಾಗಿ ನಿಭಾಯಿಸಬೇಕು. ಇಂದಿನ ತಾಂತ್ರಿಕ ಯುಗದ ಜಂಜಾಟದಲ್ಲಿ ಎಲ್ಲರೂ ಮುಳುಗಿ ಹೋಗಿದ್ದು, ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಹಣ, ನಗದು ಹೊಂದಿದ್ದ ಪರ್ಸ್ ಅನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಶಾಲೆಯ ಹಳೇ ವಿದ್ಯಾರ್ಥಿ, ಕಂಡಕ್ಟರ್ ನಾಗೇಂದ್ರ ಅವರನ್ನು ಸನ್ಮಾನಿಸಲಾಯಿತು.
20 ವರ್ಷಗಳ ಅಂತರವನ್ನು ಒಂದು ದಿನದ ಆತ್ಮೀಯತೆ ಮರೆಸಿತು; ಕಾಲ ಬದಲಾದರೂ ಗುರುಗಳ ಮೇಲಿನ ಗೌರವ ಮತ್ತು ಸ್ನೇಹಿತರ ಮೇಲಿನ ಪ್ರೀತಿ ಎಂದಿಗೂ ಬದಲಾಗುವುದಿಲ್ಲ ಎಂಬ ಸಂದೇಶ ಕಾರ್ಯಕ್ರಮದಲ್ಲಿ ಕಂಡುಬಂತು.
ಸರ್ಕಾರಿ ಕಾಲೇಜು ಶಿಕ್ಷಕರಿಗೆ ಸನ್ಮಾನ
ಶ್ರೀ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಿಕ್ಷಕರಾದ ಎಸ್.ಎಸ್.ನಾಗಪ್ಪ, ಹರೀಶ್, ಮಹಾಲಕ್ಷ್ಮಿ, ಪಿ.ಜಿ.ರುದ್ರಪ್ಪ, ಬಿ.ನಾಗರಾಜು, ಆರ್. ರಾಜೇಂದ್ರ, ಕೆ.ವಿ.ಸುರೇಶ್ , ಬಿ.ಎಸ್.ಸಾವಿತ್ರಿ, ಮಹಾದೇವಯ್ಯ, ಮಾದೇಗೌಡ, ರಾಮಚಂದ್ರ ಭಟ್, ದೇವರಾಜು, ತುಳಸಿ, ಸಿಬ್ಬಂದಿ ಮಲ್ಲಿಗಮ್ಮ ಅವರನ್ನು ಸನ್ಮಾನಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.