ಕನ್ನಡಪ್ರಭ ವಾರ್ತೆ ಶಿರಹಟ್ಟಿತಾಲೂಕಿನಲ್ಲಿ ಶುಕ್ರವಾರ ಮಧ್ಯಾಹ್ನ ಗುಡುಗು, ಸಿಡಿಲು ರಭಸದ ಗಾಳಿಯೊಂದಿಗೆ ಮಳೆ ಸುರಿದಿದೆ. ಬಿಸಿಲ ಬೇಗೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಮಧ್ಯಾಹ್ನ ೩ ಗಂಟೆಗೆ ಮೋಡ ಕವಿದ ವಾತಾವರಣ ನಿರ್ಮಾಣಗೊಂಡು ಬಿರುಸಿನ ಗಾಳಿ, ಗುಡುಗು, ಸಿಡಿಲಿನೊಂದಿಗೆ ಒಮ್ಮೆಲೆ ಆರಂಭವಾಗಿ ಒಂದು ಗಂಟೆಗೂ ಹೆಚ್ಚು ಸಮಯ ಸುರಿದಿದೆ. ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ಹೊಸಳ್ಳಿ, ಜಲ್ಲಿಗೇರಿ, ಕಡಕೋಳ, ಕುಸ್ಲಾಪುರ, ಮಾಗಡಿ, ಹರಿಪೂರ, ಪರಸಾಪುರ, ಹೊಳಲಾಪುರ, ವರವಿ, ಮಜ್ಜೂರ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಮಳೆ ಸುರಿದಿದೆ.ರೈತಾಪಿ ವರ್ಗ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಹದಭರಿತ ಮಳೆ ಅಲ್ಲಲ್ಲಿ ಸುರಿದಿದ್ದು, ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಬಹುತೇಕ ಕೆರೆ ಕಟ್ಟೆಗಳು ನೀರಿಲ್ಲದೆ ಬತ್ತಿ ಬರಿದಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಸುರಿದ ಮಳೆಯಿಂದ ಸಂತಸ ಪಡುವಂತಾಗಿದೆ.
ಅಲ್ಲಲ್ಲಿ ಉತ್ತಮ ಹಾಗೂ ಇನ್ನು ಕಲವೆಡೆ ಅಲ್ಪ- ಸ್ವಲ್ಪ ಮಳೆ ಬಿದ್ದಿದ್ದು, ಉತ್ತಮ ಮಳೆ ಬೀಳುವ ಆಸೆ ಜನರಲ್ಲಿ ಚಿಗುರೊಡೆದಿದೆ. ಮಳೆ ನಿಂತರೂ ಬಿರುಸಿನ ಗಾಳಿ, ಮೋಡ ಕವಿದ ವಾತಾವರಣ ಬಹುತೇಕ ಕಡೆಗಳಲ್ಲಿ ಮುಂದುವರೆದಿತ್ತು.ಮುಂಡರಗಿಯಲ್ಲಿ ಗಾಳಿ, ಮಳೆ
ಗುರುವಾರ ಸಂಜೆ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಹೆಸರೂರು, ಕಕ್ಕೂರು, ಕಕ್ಕೂರ ತಾಂಡಾ, ನಾಗರಹಳ್ಳಿ, ರಾಮೇನಹಳ್ಳಿ ಗ್ರಾಮಗಳಲ್ಲಿ ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ.ಅದೇ ರೀತಿ ಶುಕ್ರವಾರ ಸಂಜೆ 4 ಗಂಟೆಗೆ ಭಾರೀ ಬಿರುಗಾಳಿ ಜತೆಗೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಬರದೂರು, ಮೇವುಂಡಿ, ಡಂಬಳ, ಪೇಠಾಲೂರು, ಕಲಕೇರಿ, ಬಾಗೇವಾಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆಯಾಗಿದೆ.ಭಾರೀ ಗಾಳಿ ಮಳೆಯಿಂದಾಗಿ ಮುಂಡರಗಿ ಪಟ್ಟಣದಲ್ಲಿ ಸುಮಾರು ಒಂದೂವರೆ ಗಂಟೆಗೂ ಅಧಿಕ ಸಮಯ ವಿದ್ಯುತ್ ವ್ಯತ್ಯಯವಾಗಿತ್ತು. ಗಾಳಿಮಳೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿದ ಕುರಿತು ವರದಿಯಾಗಿಲ್ಲ.