ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ವೈಭವದ ಬ್ರಹ್ಮರಥೋತ್ಸವ

KannadaprabhaNewsNetwork |  
Published : Apr 19, 2025, 12:35 AM IST
32 | Kannada Prabha

ಸಾರಾಂಶ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವು ಗುರುವಾರ ರಾತ್ರಿ ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡರು. ‘ಪುತ್ತೂರು ಬೆಡಿ’ ಎಂದೇ ಪ್ರಖ್ಯಾತಿ ಪಡೆದಿರುವ ಸುಡುಮದ್ದು ಪ್ರದರ್ಶನವು ಬಾನಂಗಳದಲ್ಲಿ ಚಿತ್ತಾರ ಮೂಡಿಸಿತ್ತು.

ಕನ್ನಡಪ್ರಭ ವಾರ್ತೆ ಪುತ್ತೂರು

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವು ಗುರುವಾರ ರಾತ್ರಿ ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡರು. ‘ಪುತ್ತೂರು ಬೆಡಿ’ ಎಂದೇ ಪ್ರಖ್ಯಾತಿ ಪಡೆದಿರುವ ಸುಡುಮದ್ದು ಪ್ರದರ್ಶನವು ಬಾನಂಗಳದಲ್ಲಿ ಚಿತ್ತಾರ ಮೂಡಿಸಿತ್ತು.

ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಆರಂಭದಲ್ಲಿ ಬ್ರಹ್ಮರಥ ಸೇವೆ ನೀಡಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ಬಾರಿ ಸುಮಾರು ೫ ಲಕ್ಷ ರು. ವೆಚ್ಚದ ಸುಡುಮದ್ದು ಪ್ರದರ್ಶನ ನಡೆಸಲಾಯಿತು. ದೇವಳದ ಹಣವನ್ನು ಬಳಸದೆ ಭಕ್ತರು ನೀಡಿದ ದೇಣಿಗೆಯ ಸಹಾಯದಿಂದಲೇ ಈ ಬಾರಿಯ ಸುಡುಮದ್ದು ಪ್ರದರ್ಶನ ನಡೆದಿರುವುದು ವಿಶೇಷ.

ಗುರುವಾರ ಬೆಳಗ್ಗೆ ದೇವಸ್ಥಾನದಲ್ಲಿ ಉತ್ಸವ, ಕಟ್ಟೆಪೂಜೆ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಂಜೆ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು. ಬಳಿಕ ಬ್ರಹ್ಮರಥದ ಬಳಿ ಕಾಜುಕುಜುಂಬ ದೈವದ ನುಡಿಗಟ್ಟು ನಡೆದು ದೇವರು ರಥಾರೂಢರಾದರು. ಬಳಿಕ ಪುತ್ತೂರು ಬೆಡಿ ಆರಂಭಗೊಂಡಿತು. ಸುಮಾರು ೧ ಗಂಟೆ ಕಾಲ ಸುಡುಮದ್ದು ಪ್ರದರ್ಶನ ನಡೆದು ಬಳಿಕ ಬ್ರಹ್ಮರಥೋತ್ಸವ ನಡೆಯಿತು.

ಬಳಿಕ ಬ್ರಹ್ಮರಥದಿಂದ ಇಳಿದ ದೇವರು ಬಂಗಾರ್ ಕಾಯರ್‌ಕಟ್ಟೆ ಸವಾರಿಯ ಬಳಿಕ ಅಂಕೆತ್ತಿಮಾರ್ ಕಟ್ಟೆಯಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ದಂಡ ನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆಯ ಬಳಿಕ ದೇವಳದ ಒಳಗೆ ಪ್ರವೇಶ, ಶಯನ ನಡೆಯಿತು.

ಪೊಲೀಸ್ ಬಂದೋಬಸ್ತು:

ಜಾತ್ರೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಜಿಲ್ಲೆಯಗಳ ಪೊಲೀಸರ ಜೊತೆಗೆ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ ಬಂದೋಬಸ್ತ್ ನಿರತರಾಗಿದ್ದರು. ಅದರೊಂದಿಗೆ ನೂರಾರು ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಣ್ಗಾವಲು ನಡೆಸಲಾಗಿತ್ತು.

ಪುತ್ತೂರು ಕೆಎಸ್ಸಾರ್ಟಿಸಿ ವತಿಯಿಂದ ಬ್ರಹ್ಮರಥೋತ್ಸವದ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ