ಕನ್ನಡಪ್ರಭ ವಾರ್ತೆ ಹುಣಸಗಿ
ಶುಕ್ರವಾರ, ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪ್‌ನ ನೀಲಕಂಠೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಿದ್ದ, ಪ್ರಥಮ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಕೃಷ್ಣಾ ಭೀಮಾ ನದಿಗಳ ಹೃದಯ ಭಾಗದ ತಾಲೂಕಿನ ವಿವಿಧ ಗ್ರಾಮಗಳಿಂದ ಬೆಳಿಗ್ಗೆಯಿಂದಲೇ ಕೊರೆವ ಚಳಿ ಲೆಕ್ಕಿಸದೆ ಸಾಹಿತಿಗಳು, ಕನ್ನಡದ ಅಪಾರ ಮನಸುಗಳು, ಮಹಿಳೆಯರು ಕುಂಭಕಳಸ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನೆರಹೊರೆಯ ಶಾಲೆಯ ಮಕ್ಕಳು, ರೈತರು, ಸಮ್ಮೇಳನದ ಯಶಸ್ವಿಗೆ ಕೈಜೋಡಿಸಿದ್ದ ಪರಿಣಾಮ ಸಮ್ಮೇಳನದ ಅಕ್ಷರಶಃ ಇತಿಹಾಸದ ಪುಟ ಸೇರಿತು.
ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ರಾರಾಜಿಸಿದ ಕನ್ನಡ ಬಾವುಟಗಳು, ಗಣ್ಯರ ಉಡುಪುಗಳು, ಕೊರಳಲ್ಲಿ ಬಾವುಟ ಬಣ್ಣದ ರುಮಾಲುಗಳು ಸೇರಿದಂತೆ ವಿವಿಧಡೆ ಆಗಮಿಸಿದ್ದ ಹತ್ತು ಹಲವಾರು ನೃತ್ಯಗಳು ವಿಜೃಂಭಿಸಿದವು.ಧ್ವಜಾರೋಹಣ: ಬೆಳಗ್ಗೆ 7-30ಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ರಾಷ್ಟ್ರಧ್ವಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೆಂಕಟಗಿರಿ ದೇಶಪಾಂಡೆ ಪರಿಷತ್ ಧ್ವಜಾರೋಹಣ ನೆರವೇರಿಸಿದರು.
ನಂತರದಲ್ಲಿ ಜರುಗಿದ ಪಟ್ಟಣ ಮಹಾಂತಸ್ವಾಮಿ ವೃತ್ತದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮಾಜಿ ಸಚಿವ ರಾಜೂಗೌಡ ಅವರ ಸಹೋದರರಾದ ಹನುಮಂತನಾಯಕ (ಬಬ್ಲುಗೌಡ) ಅವರು ಮೆರವಣಿಗೆಗೆ ಚಾಲನೆ ನೀಡಿದರು. ದಾರಿಯುದ್ದಕ್ಕೂ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸುಮಂಗಲಿಯರು ಹೊತ್ತು ಸಾಗಿದ ಪೂರ್ಣಕುಂಭ ಹಾಗೂ ಕಳಶ ಕನ್ನಡಮ್ಮನ ಮೆರವಣಿಗೆಗೆ ಆಕರ್ಷಣೆ ತಂದಿತು. ಮೆರವಣಿಗೆಯಲ್ಲಿ ಸಹಸ್ರ ಕನ್ನಡದ ಅಭಿಮಾನಿಗಳು, ರಾಜಕೀಯ ಗಣ್ಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳ ಸಹಕಾರ ವಿಶೇಷ ಮೆರಗು ನೀಡಿತು.ಗಮನ ಸೆಳೆದ ಮೆರವಣಿಗೆ:
ಪುಷ್ಪಗಳಿಂದ ಅಲಂಕೃತಗೊಂಡಿದ್ದ ಸಾರೋಟದಲ್ಲಿ ಸಾಗಿದ ಸಮ್ಮೇಳನಾಧ್ಯಕ್ಷ ವೀರೇಶ ಹಳ್ಳೂರ ಹಾಗೂ ಕಸಾಪ ತಾಲೂಕಾಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಅವರುಗಳ ಮೆರವಣಿಗೆ ಸುಮಾರು 3 ಗಂಟೆಗೂ ಹೆಚ್ಚು ಕಾಲ ಜರುಗಿತು. ರಾಜ್ಯ ಹೆದ್ದಾರಿಯ ಮೂಲಕ ಸಾಗಿದ ಮೆರವಣಿಗೆಯಲ್ಲಿ, ಉಡುಪಿಯ ಹೆಬ್ರಿಯ ಚಂಡೆಮದ್ದಳೆ ವಾದ್ಯ ತಂಡದವರು ನಡೆಸಿಕೊಟ್ಟ ವಾದ್ಯಮೇಳ ಮೆರವಣಿಗೆಗೆ ಕಳೆ ನೀಡಿತ್ತು. ಇದರೊಟ್ಟಿಗೆ ಸಮೀಪದ ತೀರ್ಥ ಗ್ರಾಮದ ಸರ್ಕಾರಿ ಶಾಲಾ ಮಕ್ಕಳ ಲೇಜಿಂ, ಬಳ್ಳಾರಿ ಜಿಲ್ಲೆಯ ಕೂಡ್ಲಗಿಯ ಡೊಳ್ಳಿನ ಕುಣಿತ ತಂಡ ಹಾಗೂ ಶಹಾಪೂರ ಮತ್ತು ಕೂಚಬಾಳ, ಗೋನಾಳ ಗ್ರಾಮಗಳಿಂದ ಆಗಮಿಸಿದ್ದ ತಮಟೆ ವಾದ್ಯಮೇಳ ತಂಡಗಳ ಮೆರವಣಿಗೆ ಜನಾಕರ್ಷಿಸಿತು. ಸುಮಾರು ಮೂರು ಗಂಟೆಗಳ ಕಾಲ ರಾಜ್ಯ ಹೆದ್ದಾರಿ ಮೂಲಕ ಸಾಗಿ ಬಂದ ಮೆರವಣಿಗೆಯಲ್ಲಿ ಅಂದಾಜು 2 ಸಾವಿರಕ್ಕಿಂತಲೂ ಹೆಚ್ಚಿನ ಕನ್ನಡಾಭಿಮಾನಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ರಾಜ್ಯ ಹೆದ್ದಾರಿಯ ಮೂಲಕ ಶ್ರೀ ದೇವರ ದಾಸಿಮಯ್ಯ ಮಹಾದ್ವಾರದ ಮೂಲಕ ಶ್ರೀ ನೀಲಕಂಠೇಶ್ವರ ಮಹಾಮಂಟಪದಲ್ಲಿ ನಿರ್ಮಿಸಲಾಗಿದ್ದ ಶ್ರೀ ಕೊಡೇಕಲ್ ಬಸವೇಶ್ವರ ಪ್ರಧಾನ ವೇದಿಕೆ ಬಂದು ತಲುಪಿತು.ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ರಾಜಾ ಕುಶಾಲನಾಯಕ ಜಹಾಗೀರದಾರ, ವಿರೇಶ ಚಿಂಚೋಳಿ, ಬಸವ್ರಾಜ ಸಜ್ಜನ, ಗುರು ಹುಲಕಲ್, ಎಚ್,ಸಿ,ಪಾಟೀಲ, ಡಾ, ಬಸನಗೌಡ ಅಳ್ಳಿಕೋಟಿ, ಸಿದ್ದನಗೌಡ ಕರಿಬಾವಿ, ಗುರು ಹುಲಕಲ್, ಬಸವರಾಜ ಮೇಲಿನಮನಿ, ದೇವು ಗೋಪಾಳಿ, ನೀಲಮ್ಮ ನಾಗರಬೆಟ್ಟ, ಆನಂದ ಬಾರಿಗಿಡದ, ರಮೇಶ ಬಿರಾದಾರ, ಶಿವರಾಜ ಹೋಕ್ರಾಣಿ, ಸೇರಿದಂತೆ ಹಲವರಿದ್ದರು.
ಪುಸ್ತಕಗಳ ಖರೀದಿ ಜೋರು: ಸಮ್ಮೇಳನದ ಆವರಣದ ಬದಿಯಲ್ಲಿ ವ್ಯವಸ್ಥಿತವಾಗಿ ನಿರ್ಮಾಣ ಮಾಡಿದ್ದ ಪುಸ್ತಕ ಮಳಿಗೆಗಳು ಹಾಗೂ ಕರಕುಶಲ ಮಳಿಗೆಗಳು ಕನ್ನಡ ಸಾಹಿತ್ಯಾಸಕ್ತರು ವಿವಿಧ ಲೇಖಕರ, ಕವಿಗಳ ರಚನೆಯ ಪುಸ್ತಕ ಖರೀದಿ ಗಮನ ಸೆಳೆಯಿತು. ಮಳಿಗೆಗಳಲ್ಲಿ ಹೊಸ ಮತ್ತು ಹಳೆಯ ಪುಸ್ತಕಗಳನ್ನು ಪರಿಚಯಿಸುತ್ತಿದ್ದ ವ್ಯಾಪಾರಿಗಳ ಪರಸ್ಪರ ಮಾತುಕತೆ ಹಾಗೂ ಪೊಲೀಸರೂ ಸಹ ಖರೀದಿಯತ್ತ ಮುಖ ಮಾಡಿದ್ದು ವಿಶೇಷವಾಗಿತ್ತು.ಕಾಲಜ್ಞಾನಿಯ ಪ್ರಸಾದ: ಸಮ್ಮೇಳನಕ್ಕೆ ಆಗಮಿಸುವ ಕನ್ನಡದ ಮನಸ್ಸುಗಳ ಹೊಟ್ಟೆ ತುಂಬಿಸಲು ಕೊಡೇಕಲ್ ಬಸವೇಶ್ವರರ ಪ್ರಸಾದವಾದ ಮಾದಲಿ, ಹಾಲು, ತುಪ್ಪ ಅನ್ನ ಸಾರು ಬದನೇಕಾಯಿ ಪಲ್ಯ, ಉಪ್ಪಿನಕಾಯಿ ಊಟದ ಮಾದರಿಯನ್ನು ಸಿದ್ದಪಡಿಸಲಾಗಿತ್ತು. 6 ಜನರಿಂದ ಸಿದ್ದಪಡಿಸಿದ್ದ ಊಟದ ವ್ಯವಸ್ಥೆಗೆ ವಿಐಪಿ ಸೇರಿ 8 ಕೌಂಟರ್‌ಗಳನ್ನು, 45 ಅಡುಗೆ ಸಹಾಯಕರು ಸುಮಾರು 10 ಸಾವಿರ ಕನ್ನಡದ ಮನಸ್ಸುಗಳಿಗೆ ಸುವ್ಯವಸ್ಥಿತ ಊಟ ಸಿದ್ಧಪಡಿಸಿದ್ದರು.
ಅಂಗನವಾಡಿ ಕಾರ್ಯಕರ್ತೆಯರು, ಆಶಾ, ಶಿಕ್ಷಕರು, ಶಾಲಾ ಕಾಲೇಜು ಮಕ್ಕಳು, ಸಾಹಿತಿಗಳು, ಯುವ ಸಾಹಿತಿಗಳು, ಗ್ರಾಮೀಣ ಭಾಗದಿಂದ ಬಂದಿದ್ದ ಜನಸ್ತೋಮ, ಸರ್ಕಾರಿ ನೌಕರರು, ರಾಜಕೀಯ ಗಣ್ಯರು, ಸಮಾಜ ಸೇವಕರು, ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಮುದಾಯದ ಮುಖಂಡರು, ನಾನಾ ಸಂಘಟಕರು ಕೈಜೋಡಿಸಿದ್ದು ಸಮ್ಮೇಳನದ ಯಶಸ್ವಿಗೆ ಪೂರಕವಾಗಿತ್ತು.