ವೈಭವದ ಕಲ್ಯಾಣೋತ್ಸವ, ಗರುಡೋತ್ಸವ

KannadaprabhaNewsNetwork |  
Published : Mar 11, 2026, 02:15 AM IST
10ಕೆಎನ್‌ಕೆ-1                                                                 ಕಲ್ಯಾಣೋತ್ಸವದಲ್ಲಿ ಸಚಿವ ಶಿವರಾಜ ತಂಗಡಗಿ ಕುಟುಂಬಸ್ಥರು ಭಾಗಿಯಾಗಿ ಕನ್ಯಾಧಾನ ಮಾಡಿದರು. 10ಕೆಎನ್‌ಕೆ-೨ಕನಕಗಿರಿಯ ರಾಜಬೀದಿಯಲ್ಲಿ ಗರುಡೋತ್ಸವವು ವೈಭವದಿಂದ ನಡೆಯಿತು.  | Kannada Prabha

ಸಾರಾಂಶ

ಮೆರವಣಿಗೆಯುದ್ದಕ್ಕೂ ಸಿಡಿಸಿದ ಪಟಾಕಿಗಳಿಂದ ಆಗಸದಲ್ಲಿ ಮೂಡಿದ ಬಣ್ಣ-ಬಣ್ಣದ ಚಿತ್ತಾರಗಳು ಎಲ್ಲರನ್ನು ಮೂಕ ವಿಸ್ಮಿತರನ್ನಾಗಿಸಿದವು

ಕನಕಗಿರಿ: ಐತಿಹಾಸಿಕ ಪ್ರಸಿದ್ಧ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ ಅಂಗವಾಗಿ ಕಲ್ಯಾಣೋತ್ಸವದ ನಂತರ ಗರುಡೋತ್ಸವವು ಮಂಗಳವಾರ ಬೆಳಗಿನ ಜಾವ ಗೋವಿಂದನ ನಾಮಸ್ಮರಣೆಯೊಂದಿಗೆ ವೈಭವದಿಂದ ನೆರವೇರಿತು.

ಬೆಳಗಿನ ಜಾವ ೪.೫೦ಕ್ಕೆ ಆರಂಭವಾದ ಗರುಡೋತ್ಸವವು ರಾಜಬೀದಿಯ ಮೂಲಕ ತೇರಿನ ಹನುಮಪ್ಪನ ದೇವಸ್ಥಾನ ತಲುಪಿ ಸ್ವಸ್ಥಾನಕ್ಕೆ ಮರಳಿತು. ಬಂಗಾರ ವರ್ಣದ ಗರುಡ ವಾಹನ ಮೂರ್ತಿಯ ಮೇಲೆ ಸಂಪ್ರದಾಯದಂತೆ ಹತ್ತಾರು ಕಾರ್ಮಿಕರಿಂದ ಸಿದ್ಧಗೊಂಡ ಬೃಹತ್ ನೀಲಿಪಟ ಹೊಂದಿದ ಉಚ್ಛಾಯದಲ್ಲಿ ಲಕ್ಷ್ಮೀ ನರಸಿಂಹನು ಶ್ರೀದೇವಿ ಭೂದೇವಿಯರೊಂದಿಗೆ ಸಾಗಿದನು. ಭಕ್ತರು ದಿವಟಗಿ ಹಿಡಿದು ಕೊಬ್ಬರಿ, ಕರ್ಪೂರ ಸುಟ್ಟು ಪಂಜಿನ ಬೆಳಕಿನಡಿ ರಾಜಬೀದಿಯಲ್ಲಿ ಸಂಭ್ರಮದಿಂದ ಮೆರವಣಿಗೆ ನಡೆಸಿದರು.

ಮೆರವಣಿಗೆಯುದ್ದಕ್ಕೂ ಸಿಡಿಸಿದ ಪಟಾಕಿಗಳಿಂದ ಆಗಸದಲ್ಲಿ ಮೂಡಿದ ಬಣ್ಣ-ಬಣ್ಣದ ಚಿತ್ತಾರಗಳು ಎಲ್ಲರನ್ನು ಮೂಕ ವಿಸ್ಮಿತರನ್ನಾಗಿಸಿದವು. ಉತ್ಸವವು ಸೂರ್ಯೋದಯಕ್ಕೂ ಮುನ್ನವೇ ಮೂಲ ಸ್ಥಾನ ತಲುಪಿತು. ಗೊಲ್ಲ ಜನಾಂಗದವರು ಹಳದಿ ವಸ್ತ್ರಧಾರಿಗಳಾಗಿ ಗಮನ ಸೆಳೆದರು.

ಉಪಹಾರದ, ಪ್ರಸಾದದ ವ್ಯವಸ್ಥೆ: ಗರುಡೋತ್ಸವ ಸಂಪನ್ನದ ನಂತರ ನೆರೆದಿದ್ದ ಸಾವಿರಾರು ಭಕ್ತರಿಗೆ ಕೇಸರಿಬಾತ್,ಉಪ್ಪಿಟ್ಟು, ಇಡ್ಲಿ ಚಟ್ನಿ, ಅವಲಕ್ಕಿ, ಪಲಾವ್, ಚಿತ್ರನ್ನ ಉಪಹಾರದ ವ್ಯವಸ್ಥೆ ಸ್ಥಳೀಯರಿಂದ ಮಾಡಲಾಗಿತ್ತು. ಭಕ್ತರು ಸರದಿಯಲ್ಲಿ ನಿಂತು ಉಪಹಾರ ಸ್ವೀಕರಿಸಿದರು. ಇನ್ನೂ ಬೆಳಗಿನ ಜಾವ ಹಾಗೂ ಮಧ್ಯಾಹ್ನ ಸಮಯದಲ್ಲಿ ದೇವಸ್ಥಾನ ಸಮಿತಿಯಿಂದ ಅಮೃತ ಕಲಷ ಪ್ರಸಾದ ವಿತರಿಸಲಾಯಿತು.

ತಾಪಂ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಟಿ.ಜೆ ರಾಮಚಂದ್ರ, ಬಸವಂತಗೌಡ, ವೀರೇಶ ಸಮಗಂಡಿ, ವಾಗೀಶ ಹಿರೇಮಠ, ಮಹಾಂತೇಶ ಸಜ್ಜನ ಸೇರಿದಂತೆ ಸಾವಿರಾರು ಭಕ್ತರು ಇದ್ದರು.

ಪತ್ನಿಯೊಂದಿಗೆ ಸಚಿವ ತಂಗಡಗಿ ಭಾಗಿ: ಕಲ್ಯಾಣೋತ್ಸವದಲ್ಲಿ ಪತ್ನಿ ವಿದ್ಯಾ ತಂಗಡಗಿಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ತಹಸೀಲ್ದಾರ್ ವಿಶ್ವನಾಥ ಮುರುಡಿ ದಂಪತಿಗಳು ಶ್ರೀ ಕನಕಾಚಲಪತಿಗೆ ಶ್ರೀದೇವಿ, ಭೂದೇವಿಯರನ್ನು ಕನ್ಯಾದಾನ ಮಾಡಿದರೆ, ಅರ್ಚಕರ ಕುಟುಂಬವು ಕನಕಾಚಲಪತಿ (ಗಂಡಿನ)ಪೌರೋಹಿತ್ಯ ವಹಿಸಿಕೊಂಡು ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಲ್ಯಾಣ ನಡೆಸಿಕೊಟ್ಟರು.

ರಾಜಬೀದಿಯಲ್ಲಿ ಹಾಲಿ-ಮಾಜಿಗಳ ಶಕ್ತಿ ಪ್ರದರ್ಶನ: ಕ್ಷೇತ್ರದಿಂದ ಪ್ರತಿನಿಧಿಸುವ ಹಾಲಿ ಸಚಿವ ಶಿವರಾಜ ತಂಗಡಗಿ ಹಾಗೂ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಗರುಡೋತ್ಸವ ಮೆರವಣಿಗೆ ವೇಳೆ ರಾಜಬೀದಿಯಲ್ಲಿ ತಮ್ಮ ಬೆಂಬಗಲಿಗರೊಂದಿಗೆ ಶಕ್ತಿ ಪ್ರದರ್ಶನ ನಡೆಸಿದರು. ಮೆರವಣಿಗೆಯ ಸಂದರ್ಭದಲ್ಲಿ ಉತ್ಸವದ ಬಲನೊಗ ಹೊತ್ತು ಸೇವೆ ಸಲ್ಲಿಸಿದ ಇಬ್ಬರೂ ಜನರತ್ತ ಕೈಬೀಸಿದರು. ಚುನಾವಣೆ ಇನ್ನೆರೆಡು ವರ್ಷ ಬಾಕಿ ಇರುವಾಗಲೇ ಹಾಲಿ-ಮಾಜಿಗಳಲ್ಲಿ ರಾಜಕೀಯ ತುರುಸು ಹೆಚ್ಚಿಸಿದೆ. ಇತ್ತ ಎರಡೂ ಪಕ್ಷಗಳ ನಾಯಕರು ತಮ್ಮ ತಮ್ಮ ಪಕ್ಷದ ಹಿರಿಯರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಾಚಲಪತಿ ಜಾತ್ರೆ ಸಜ್ಜುಗೊಂಡ ಕನಕಗಿರಿ
ಕಾರ್ಖಾನೆ ಸಮಸ್ಯೆ ಪರಿಹಾರಕ್ಕೆ ಶೀಘ್ರ ಎಚ್‌ಡಿಕೆ ಭೇಟಿ