ದಾಬಸ್‍ಪೇಟೆ: ಶಾಲೆಗಳಲ್ಲಿ ಉತ್ತಮ ಕಲಿಕಾ ಪರಿಸರಕ್ಕೆ ವಾತಾವರಣವೂ ಪೂರಕ ಎಂಬ ಘೋಷವಾಕ್ಯದೊಂದಿಗೆ ನಮ್ಮ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸುತ್ತಿದ್ದೇವೆ ಎಂದು ಕೆಎಲ್‍ಇ ಕಾಲೇಜ್ ಆಫ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜಮ್ಮ ತಿಳಿಸಿದರು.
ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಡಾ.ಮಮತಾ ಮಾತನಾಡಿ, ಈ ಯೋಜನೆಯಡಿ ನಲಿ ಕಲಿ ತರಗತಿಗಳಾದ ನರ್ಸರಿ, ಎಲ್‍ಕೆಜಿ ಹಾಗೂ ಯುಕೆಜಿ ಕೊಠಡಿಗಳನ್ನು ಮಕ್ಕಳ ಮನಸ್ಸಿಗೆ ಹತ್ತಿರವಾಗುವಂತೆ ಬಣ್ಣಬಣ್ಣದ ಹಾಗೂ ಮನರಂಜನಾತ್ಮಕ ಚಿತ್ರಗಳಿಂದ ಅಲಂಕರಿಸಲಾಗಿದೆ. ಮಕ್ಕಳಲ್ಲಿ ಸಂತೋಷದಾಯಕ ಕಲಿಕಾ ವಾತಾವರಣವನ್ನು ಉಂಟು ಮಾಡಲಾಗಿದೆ. ಹಿರಿಯ ತರಗತಿಗಳ ಕೊಠಡಿಗಳಲ್ಲಿ ಪಠ್ಯಾಧಾರಿತ ಮತ್ತು ಜಾಗೃತಿ ಮೂಡಿಸುವ ವಿಷಯಗಳನ್ನು ಒಳಗೊಂಡ ಚಿತ್ರಗಳನ್ನು ಅಳವಡಿಸಿ ಶಿಕ್ಷಣದತ್ತ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಮಂಜುನಾಥ್, ಬೂದಿಹಾಳ್ ವಿಎಸ್‌ಎಸ್‌ಎನ್ ಅಧ್ಯಕ್ಷ ಮಧುಕುಮಾರ್, ಯುವಕ ಸಂಘದ ಗುರು ಪ್ರಸಾದ, ಕಲಾವಿದ ಪವನ್ ರಾವ್ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪೋಟೋ 3 : ಬೆಂಗಳೂರಿನ ಕೆಎಲ್‍ಇ ಕಾಲೇಜ್ ಆಫ್ ಫಾರ್ಮಸಿಯ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸರ್ಕಾರಿ ಶಾಲಾಭಿವೃದ್ಧಿ ಮತ್ತು ಸೌಂದರ್ಯೀಕರಣ ಕಾರ್ಯಕ್ರಮದ ಪ್ರಯುಕ್ತ ಬೂದಿಹಾಲ್ ಸರ್ಕಾರಿ ಶಾಲೆಗೆ ಸುಣ್ಣಬಣ್ಣ ಹಚ್ಚಿ ಚಿತ್ರ ಬಿಡಿಸಿ ಅಲಂಕರಿಸಿರುವುದು.