ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಯುವ ಜನರ ಭವಿಷ್ಯದ ಬದುಕು, ಸರಿ ದಿಕ್ಕಿನ ನಡೆಗೆ ಕುವೆಂಪು ವಿಚಾರಧಾರೆಗಳು ದಿಕ್ಸೂಚಿಯಾಗಿವೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಅಭಿಪ್ರಾಯಪಟ್ಟರು.ಕುವೆಂಪು ಜನ್ಮದಿನದ ಅಂಗವಾಗಿ ಚಿತ್ರದುರ್ಗ ವಿಜ್ಞಾನ ಕೇಂದ್ರದಿಂದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮೌಢ್ಯ, ಜಾತಿ, ಪುರೋಹಿತಶಾಹಿಗಳನ್ನು ಕಟುವಾಗಿ ವಿರೋಧಿಸುತ್ತಿದ್ದ ರಾಷ್ಟ್ರಕವಿ ಮಾತಿನ ಕಾವು ಇನ್ನು ಆರಿಲ್ಲ. ಧರ್ಮ, ಜಾತಿಯಿಂದ ಪ್ರತಿಯೊಬ್ಬರು ಹೊರಬರಬೇಕಾದರೆ ನೈತಿಕ ಶಿಕ್ಷಣ ಬೇಕು. ಜಗತ್ತಿಗೆ ವಿಶ್ವಮಾನವ ಪ್ರೀತಿ ಬೇಕಿದೆ. ಜಾತಿ ಎನ್ನುವುದು ಕೆಟ್ಟ ರೋಗ. ಮನುಷ್ಯ ಕುಲ ಒಂದೆ ಎನ್ನುವ ಸಂದೇಶವನ್ನು ಕುವೆಂಪು ವಿಶ್ವಕ್ಕೆ ಸಾರಿದ್ದಾರೆಎಂದರು.
ಜಾತಿ ಧರ್ಮ ನೈಸರ್ಗಿಕವಾದುದಲ್ಲ. ಸೃಷ್ಟಿ ಮಾಡಿಕೊಂಡಿರುವುದು. ಸಂಕುಚಿತವಾಗಿ ಬದುಕುವ ಬದಲು ವಿಶಾಲವಾದ ಮನೋಭಾವನೆಯಿಂದ ಜಾತಿ, ಧರ್ಮ, ಮತ, ಪಂಥ ದಾಟಿ ವಿಶ್ವಮಾನವರಾಗಬೇಕು ಎಂಬುವುದು ಕುವೆಂಪು ಆಶಯ. 12ನೇ ಶತಮಾನದ ಬಸವಣ್ಣನವರ ಪರಂಪರೆ ಅರ್ಥಮಾಡಿಕೊಂಡಿದ್ದ ಕುವೆಂಪುರವರು ದೇವಸ್ಥಾನ, ಮಂದಿರ, ಮಸೀದಿ, ಚರ್ಚ್‍ಗಳಿಂದ ಹೊರಬಂದು ಜ್ಞಾನದ ಮೂಲಕ ಭವಿಷ್ಯ ಕಂಡುಕೊಳ್ಳಬೇಕೆಂಬ ಸಂದೇಶ ಮನುಕುಲಕ್ಕೆ ಸಾರಿದರು ಎಂದರು.ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಹೇಮಂತರಾಜ್ ಮಾತನಾಡಿ, ಕುವೆಂಪು, ಬುದ್ದ, ಬಸವ, ಅಂಬೇಡ್ಕರ್ ಇವರುಗಳನ್ನು ನೀವು ಓದದಿದ್ದರೆ, ಎಷ್ಟೆ ಪದವಿ ಪಡೆದುಕೊಂಡರು ಪ್ರಯೋಜನವಿಲ್ಲ. ಸರ್ವಾಧಿಕಾರಿಗಳ ಕೈಯಲ್ಲಿ ಅಧಿಕಾರ ಕೊಟ್ಟರೆ ಪ್ರಜಾಪ್ರಭುತ್ವ ಸತ್ವ ಕಳೆದುಕೊಳ್ಳುತ್ತದೆ. ಕುವೆಂಪುರವರ ವಿಚಾರ ಗ್ರಹಿಸದಿದ್ದರೆ ನಾಡನ್ನು ಕಟ್ಟುವುದು ಹೇಗೆ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು?
ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ಮಾತನಾಡಿಮ, ಶತಮಾನದ ಮಹಾಕವಿ ಕುವೆಂಪುರವರಲ್ಲಿ ವೈಚಾರಿಕ ಚಿಂತನೆಯಿತ್ತು. ಅವರ ಸಂದೇಶ, ಬರಹ, ಕಾವ್ಯ ಇಂದಿನ ಯುವಶಕ್ತಿಗೆ ಮುಟ್ಟಬೇಕಿದೆ. ಮೌಢ್ಯ, ಜಾತಿಯತೆ ಬಗ್ಗೆ ಕಠೋರವಾಗಿ ಮಾತನಾಡುತ್ತಿದ್ದರು. ಭಕ್ತಿ ವಂಚನೆಯ ಜಾಲ, ಪೂಜೆ ಮಂಗ ಚೇಷ್ಟೆ ಎಂದು ಪುರೋಹಿತಶಾಹಿಗಳನ್ನು ಕೆಣಕುತ್ತಿದ್ದರು. ಶ್ರೇಷ್ಟ ವ್ಯಕ್ತಿತ್ವದ ಕುವೆಂಪುರವರನ್ನು ವಿದ್ಯಾರ್ಥಿಗಳು ಓದಬೇಕು ಎಂದರು.ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಬಿ.ಟಿ.ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಚಾಲಕ ಪ್ರೊ.ಎಲ್.ನಾಗರಾಜ್, ವಿಜ್ಞಾನ ಕೇಂದ್ರದ ಸದಸ್ಯ ಮನೋಹರ್ ವೇದಿಕೆಯಲ್ಲಿದ್ದರು.