ಸರ್ಕಾರಿ ಶಾಲೆಗಳ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ಸಾಧ್ಯ

KannadaprabhaNewsNetwork |  
Published : Sep 02, 2025, 01:00 AM IST
ಪುಟಾಣಿಗಳಾದ ವಿದ್ಯಾ, ದಿಗಂತ್‌ರಿಂದ ಸ್ಮಾರ್ಟ್ ಬೋರ್ಡ್ ಉಧ್ಘಾಟನೆ | Kannada Prabha

ಸಾರಾಂಶ

೩೨ ಜಿಲ್ಲೆಗಳಲ್ಲಿ ೩೦೦ ವಿದ್ಯಾರ್ಥಿಗಳಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಇಂಟರ್‍ಯಾಕ್ಟಿವ್ ಸ್ಮಾರ್ಟ್‌ ಬೋರ್ಡ್‌ ನೀಡಲು ಉದ್ದೇಶಿಸಲಾಗಿದೆ ಎಂದು ಯುವ ಬೆಂಗಳೂರು ಟ್ರಸ್ಟ್ ಮುಖ್ಯಸ್ಥ ಕಿರಣ್‌ ಸಾಗರ್ ಹೇಳಿದ್ದಾರೆ.

- ಧುಳೆಹೊಳೆ ಶಾಲೆಯಲ್ಲಿ ೩೦ ಭಾಷೆಗಳ ಸ್ಮಾರ್ಟ್ ಬೋರ್ಡ್ ಹಸ್ತಾಂತರಿಸಿ ಮುಖ್ಯಸ್ಥ ಕಿರಣ್‌ ಸಾಗರ್ - - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ೩೨ ಜಿಲ್ಲೆಗಳಲ್ಲಿ ೩೦೦ ವಿದ್ಯಾರ್ಥಿಗಳಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಇಂಟರ್‍ಯಾಕ್ಟಿವ್ ಸ್ಮಾರ್ಟ್‌ ಬೋರ್ಡ್‌ ನೀಡಲು ಉದ್ದೇಶಿಸಲಾಗಿದೆ ಎಂದು ಯುವ ಬೆಂಗಳೂರು ಟ್ರಸ್ಟ್ ಮುಖ್ಯಸ್ಥ ಕಿರಣ್‌ ಸಾಗರ್ ಹೇಳಿದರು.

ಇಲ್ಲಿಗೆ ಸಮೀಪದ ನಂದಿಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧುಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸ್ಮಾರ್ಟ್ ಬೋರ್ಡ್‌ ಹಸ್ತಾಂತರಿಸಿ ಅವರು ಮಾತನಾಡಿದರು.

ಮೊದಲು ಶಾಲೆಯಲ್ಲಿ ಪ್ರಾರ್ಥನೆ ಮಾಡುವಾಗ ಐವರು ಮಕ್ಕಳು ತಲೆ ಸುತ್ತು ಬಂದು ಬಿದ್ದಾಗ ಆಲೋಚನೆ ಬಂದದ್ದೇ ಹಾಲು ವಿತರಣೆ. ಹೀಗಾಗಿ, ಬೆಂಗಳೂರಿನ ಒಂದು ಶಾಲೆಯಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಹಾಲು ನೀಡಿ, 3 ತಿಂಗಳು ಅವರ ಆರೋಗ್ಯದಲ್ಲಿ ಪರಿವರ್ತನೆ ಕಂಡಾಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಆಗ ಮುಖ್ಯಮಂತ್ರಿ ಅವರು ಒಪ್ಪಿ, ರಾಜ್ಯಾದ್ಯಂತ ಕ್ಷೀರಭಾಗ್ಯ ಹೆಸರಲ್ಲಿ ಯೋಜನೆ ಜಾರಿಯಾಯಿತು. ಇದರ ಪರಿಣಾಮ ಮಕ್ಕಳಲ್ಲಿ ಗಟ್ಟಿತನ ಅಳವಡಿಕೆಯಾಯಿತು ಎಂದರು.

ಮೊಬೈಲ್‌ನಲ್ಲಿ ಇರದ ವಿಷಯಗಳು ಇಂಗ್ಲಿಷ್, ವಿಜ್ಞಾನ, ಕನ್ನಡ, ಪರಿಸರ, ಆಧುನಿಕ ತಂತ್ರಜ್ಞಾನಗಳೂ ಸೇರಿ ೩೦ ಭಾಷೆಗಳ ವಿಷಯಗಳು ಸ್ಮಾರ್ಟ್ ಬೋರ್ಡ್‌ನಲ್ಲಿದೆ. ಕೈಗಳಿಂದ ಸ್ಪರ್ಶ ಮಾಡಿ ಓದಬಹುದು. 4 ದೇಶದಲ್ಲಿ ಮಕ್ಕಳ ಶಾಲೆಗಳನ್ನು ಗಮನಿಸಿದ್ದೇನೆ. ವ್ಯಕ್ತಿತ್ವ ರೂಪಿಸುವ ಶಕ್ತಿ ಸರ್ಕಾರಿ ಶಾಲೆಗಳಲ್ಲಿದೆ. ಅಮೆರಿಕಾದಲ್ಲಿ ಸರ್ಕಾರಿ ಶಾಲೆಗಳಲ್ಲಿ ಈ ಶಿಕ್ಷಣಕ್ಕೆ ಪ್ರಥಮ ಪ್ರಾಧಾನ್ಯತೆ ನೀಡಿ, ನಂತರ ಅನುದಾನಿತ, ಖಾಸಗಿ ಶಾಲೆಗಳಿಗೆ ಗಮನಹರಿಸುವರು. ಸೂಕ್ತ ಫಲಿತಾಂಶವಿಲ್ಲದೇ ಲಕ್ಷ ರು. ಶುಲ್ಕ ಪಡೆಯುವ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಿಗೆ ಭವಿಷ್ಯವಿದೆ ಎಂದ ಅವರು, ರಾಜಕಾರಣಿಗಳು ಸರ್ಕಾರಿ ಶಾಲೆಗಳಲ್ಲಿ ಆದಾಯವಿಲ್ಲ ಎಂದು ಪ್ರಗತಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಟ್ರಸ್ಟ್ ಸದಸ್ಯ ಸುನೀಲ್ ಮಾತನಾಡಿ, ಆರಂಭದ ೨೦೦೮ ರಲ್ಲಿ ಕನ್ನಡದ ಶಾಲೆಗಳು ಉಳಿಯಲು ಒಂದು ಶಾಲೆ ದತ್ತು ಪಡೆಯಲಾಗಿದೆ. ಪ್ರಸ್ತುತ ರಾಜ್ಯದ ೩೫೬ ಶಾಲೆಗಳಲ್ಲಿ ಬೆಂಚ್, ಸ್ವೆಟರ್, ಪ್ರಯೋಗಾಲಯ, ಬ್ಯಾಗ್ ಮತ್ತು ೩೦೦ ಮಕ್ಕಳಿಗೆ ವದ್ಯಾರ್ಥಿವೇತನ ವಿತರಣೆ ಮಾಡಲಾಗಿದೆ. ೫೦೦೦೦ ಮಕ್ಕಳಿಗೆ ಉಪಯೋಗವಾಗಿದ್ದು, ೨೦ ಸಾವಿರ ಸ್ವಯಂ ಸೇವಕರು ಸೇವೆ ಮಾಡುತ್ತಿದ್ದಾರೆ ಎಂದರು.

ಪುಟಾಣಿಗಳಾದ ದಿಗಂತ ಮತ್ತು ವಿದ್ಯಾ ಅವರಿಂದ ಸ್ಮಾರ್ಟ್ ಬೋರ್ಡ್ ವ್ಯವಸ್ಥೆ ಉದ್ಘಾಟನೆ ನೆರವೇರಿತು. ಎಸ್‌ಡಿಎಂಸಿ ಅಧ್ಯಕ್ಷ ನಿಜಲಿಂಗಪ್ಪ, ಗ್ರಾಮಸ್ಥರಾದ ಕೆ.ಜಿ ರಾಜು, ಪ್ರಕಾಶ್, ಶಿವನಗೌಡ, ರಮೇಶ್, ಪಾಪಣ್ಣ, ಸುನೀತಾ, ಕಸಾಪ ಅಧ್ಯಕ್ಷ ಮಂಜುನಾಥಯ್ಯ, ಉಪಾಧ್ಯಾಯರಾದ ಯಶೋಧಾ, ಮಂಗಳಾ, ಹೇಮಾ, ರಶ್ಮಿ, ಶಿವಣ್ಣ, ಷಣ್ಮುಖ, ಲೈಖಾಬಾನು ಇದ್ದರು.

- - -

(ಕೋಟ್‌) ಸ್ಮಾರ್ಟ್ ಬೋರ್ಡ್ ದೊರಕಿರುವುದು ಈ ಶಾಲೆಯ ಭಾಗ್ಯವಾಗಿದೆ. ಮುಂದಿನ ಶೈಕ್ಷಣಿಕ ವರ್ಷ ನಮ್ಮ ಶಾಲೆಯಲ್ಲಿ ೨೦೦ ವಿದ್ಯಾರ್ಥಿಗಳು ದಾಖಲಾಗುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ.

- ಶರಣ್‌ಕುಮಾರ್ ಹೆಗಡೆ, ಮುಖ್ಯ ಶಿಕ್ಷಕ

- - -

-ಚಿತ್ರ-೩.ಜೆಪಿಜಿ: ಪುಟಾಣಿಗಳಾದ ವಿದ್ಯಾ, ದಿಗಂತ್‌ರಿಂದ ಸ್ಮಾರ್ಟ್ ಬೋರ್ಡ್ ಉದ್ಘಾಟನೆ ನಡೆಯಿತು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?