ಭಟ್ಕಳ: ಪ್ರವಾದಿ ಮಹಮದ್ ಪೈಗಂಬರರ ಬಗ್ಗೆ ಉತ್ತರ ಪ್ರದೇಶದ ಸ್ವಾಮಿ ನರಸಿಂಹಾನಂದ ಅವರು ಅವಹೇಳನಕಾರಿ ಭಾಷಣ ಮಾಡಿರುವುದನ್ನು ಖಂಡಿಸಿ ಮಂಗಳವಾರ ಇಲ್ಲಿನ ಮುಸ್ಲಿಮರ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ ವ ತಂಝೀಂ ಸಂಸ್ಥೆ ಕರೆ ನೀಡಿದ ಭಟ್ಕಳ ಬಂದ್‌ಗೆ ಉತ್ತಮ ಸ್ಪಂದನೆ ದೊರೆಯಿತು.
ಬಂದ್ ಹಿನ್ನೆಲೆ ಮಂಗಳವಾರ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಮುಸ್ಲಿಮರ ಓಡಾಟ ವಿರಳವಾಗಿತ್ತು. ತಂಝೀಂ ಕರೆಯಿಂದ ಮಂಗಳವಾರ ಮುಸ್ಲಿಮರು ತಮ್ಮ ಅಂಗಡಿ ಮುಂಗಟ್ಟುಗಳನ್ನು, ಶಾಲೆ, ಕಾಲೇಜು, ಖಾಸಗಿ ಕಚೇರಿ ಬಂದ್ ಮಾಡಿದ್ದರು. ಪಟ್ಟಣದಲ್ಲಿ ಮುಸ್ಲಿಮರ ಬಂದ್ ಹಿನ್ನೆಲೆಯಲ್ಲಿ ಕೆಲವು ರಸ್ತೆಗಳು ಜನರ ಓಡಾಟ ಇಲ್ಲದೇ ಬಿಕೋ ಎನ್ನುತ್ತಿದ್ದವು.
ಪ್ರವಾದಿ ಅವರ ಅವಹೇಳನ ಖಂಡಿಸಿ ಮಂಗಳವಾರ ಮುಸ್ಲಿಮರು ಮನೆಯಿಂದ ಹೊರಬೀಳದೇ ಇರುವುದರಿಂದ ವ್ಯಾಪಾರ ವಹಿವಾಟಿನ ಮೇಲೂ ಹೊಡೆತ ಬಿದ್ದಿತ್ತು. ತರಕಾರಿ ಮಾರುಕಟ್ಟೆ, ಮೀನು ಮಾರುಕಟ್ಟೆ ಮುಂತಾದ ಪ್ರದೇಶದಲ್ಲಿ ಖರೀಧಿಗೆ ಹೆಚ್ಚಿನ ಜನರು ಇರಲಿಲ್ಲ.ಪಟ್ಟಣದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಮುಸ್ಲಿಮರ ಹೊರತಾಗಿ ಬೇರೆಯವರ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿದ್ದವು. ಮುಸ್ಲಿಮರ ಹೊರತಾಗಿ ಇತರರ ವಾಹನ ಮತ್ತು ಜನರ ಓಡಾಟ ಎಂದಿನಂತೆ ಇತ್ತು.