ಸಾರ್ವಜನಿಕರು, ಸರ್ಕಾರದ ಮಧ್ಯೆ ಕೊಂಡಿಯಾಗಿರುವ ಪತ್ರಿಕೆಗಳ ಕತ್ತು ಹಿಸುಕುವ ಸರ್ಕಾರ: ತಿಪ್ಪೇಸ್ವಾಮಿ ಕಿಡಿನುಡಿ

KannadaprabhaNewsNetwork | Updated : Jan 13 2025, 07:41 AM IST

ಸಾರಾಂಶ

ಸಾರ್ವಜನಿಕರು, ಸರ್ಕಾರದ ಮಧ್ಯೆ ಕೊಂಡಿಯಾಗಿರುವ ದಿನಪತ್ರಿಕೆಗಳ ಕತ್ತು ಹಿಸುಕುವ ಕೆಲಸ  ರಾಜ್ಯ ಸರ್ಕಾರದಿಂದಲೇ ಆಗುತ್ತಿದೆ. ಇದರಿಂದಾಗಿ ಪತ್ರಿಕೆಗಳನ್ನೇ ನಡೆಸುವುದೇ ಸವಾಲಿನ ಕಲಸವಾಗುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ, ಎ.ಸಿ.ತಿಪ್ಪೇಸ್ವಾಮಿ   ಬೇಸರ   

  ದಾವಣಗೆರೆ : ಸಾರ್ವಜನಿಕರು, ಸರ್ಕಾರದ ಮಧ್ಯೆ ಕೊಂಡಿಯಾಗಿರುವ ದಿನಪತ್ರಿಕೆಗಳ ಕತ್ತು ಹಿಸುಕುವ ಕೆಲಸವನ್ನು ರಾಜ್ಯ ಸರ್ಕಾರದಿಂದಲೇ ಆಗುತ್ತಿದೆ. ಇದರಿಂದಾಗಿ ಪತ್ರಿಕೆಗಳನ್ನೇ ನಡೆಸುವುದೇ ಸವಾಲಿನ ಕಲಸವಾಗುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ, ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಎ.ಸಿ.ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದ ಬಂಟರ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಗದಗಿನ ರಾಜ್ಯಮಟ್ಟದ ಪ್ರಥಮ ಸಮ್ಮೇಳನದ ಪೂರ್ವಸಿದ್ಧತಾ ಸಭೆ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುದ್ರಣ ವೆಚ್ಚ, ಕಾಗದ, ಸಿಬ್ಬಂದಿ ವೇತನ ಹೀಗೆ ಪ್ರತಿಯೊಂದರ ಬೆಲೆ ಗಗನಮುಖಿಯಾಗಿದೆ. ಪತ್ರಿಕೆಗಳನ್ನು ನಡೆಸುವುದೇ ಕಷ್ಟವಾಗಿದೆ. ಒಂದು ಪತ್ರಿಕೆ ಹೊರಬರಲು ನಿಗದಿಪಡಿಸಿದ ದರಕ್ಕಿಂತ 3 ಪಟ್ಟು ಹೆಚ್ಚು ಖರ್ಚು ಇದೆ. ಹೀಗಿದ್ದರೂ ಜನರು ಪತ್ರಿಕೆಗಳನ್ನು ಖರೀದಿಸಿ, ಓದಲು ಹಿಂದೇಟು ಹಾಕುತ್ತಿರುವುದು ನೋವಿನ ಸಂಗತಿ ಎಂದರು.

ಐಎನ್ಎಸ್‌ ಸದಸ್ಯವಿರುವ ಖಾಸಗಿ ಏಜೆನ್ಸಿಗಳ ಮೂಲಕ ಪ್ರಕಟಿಸುವ ಜಾಹೀರಾತುಗಳ ಬಿಲ್‌ನ ಶೇ.15 ಕಮಿಷನ್ ಕಡಿತಗೊಳಿಸಲು ಅವಕಾಶ ಇದೆ. ಆದರೆ, ವಾರ್ತಾ ಇಲಾಖೆ ಸರ್ಕಾರ ಆದೇಶ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಶೇ.15 ಕಮಿಷನ್‌ ಕಡಿತಗೊಳಿಸಿ, ಪತ್ರಿಕೆಗಳಿಗೆ ಆರ್ಥಿಕ ನಷ್ಟ ಮಾಡುತ್ತಿರುವುದು ಆಕ್ಷೇಪಾರ್ಹ. ಪತ್ರಿಕೆ ಉಳಿದರೆ ಸಂಪಾದಕರು, ಪತ್ರಕರ್ತರು ಉಳಿಯುತ್ತಾರೆ. ಈ ಹಿನ್ನೆಲೆ ಪತ್ರಕರ್ತರು, ಸಂಪಾದಕರೆಂಬ ಬೇಧ ಮರೆತು, ನಾವೆಲ್ಲರೂ ಒಂದಾಗಿ, ಪತ್ರಿಕೆಗಳನ್ನು ಉಳಿಸಬೇಕು ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಧ್ಯಮ ಪಟ್ಟಿಯ ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಗೆ ಪ್ರತಿ 2 ವರ್ಷಕ್ಕೊಮ್ಮೆ ಹಾಲಿ ಜಾಹೀರಾತು ದರಕ್ಕೆ ಶೇ.12ರಷ್ಟು ದರ ಹೆಚ್ಚಿಸಿ, ಪತ್ರಿಕೆಗಳ ಉಳಿವಿಗೆ ಆಸರೆಯಾಗಬೇಕು. ಜಾಹೀರಾತು ದರ ಹೆಚ್ಚಿಸುವ ಅಧಿಕಾರ ವಾರ್ತಾ ಇಲಾಖೆ ಆಯುಕ್ತರಿಗೆ ಇದ್ದು, ಆದಷ್ಚು ಬೇಗನೇ ಜಾಹೀರಾತು ದರ ಹೆಚ್ಚಿಸುವ ಮೂಲಕ ಸ್ಪಂದಿಸಲಿ ಎಂದು ಒತ್ತಾಯಿಸಿದರು.

ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿ, ಮಾಧ್ಯಮ ಕ್ಷೇತ್ರದ ಪ್ರತಿಯೊಬ್ಬರೂ ತೊಂದರೆ ಅನುಭವಿಸುತ್ತಿದ್ದಾರೆ. ಎಷ್ಟೇ ಸಂಘಟನೆಗಳು ಹುಟ್ಟಿದರೂ ಅವು ಮಾಧ್ಯಮ, ಪತ್ರಕರ್ತರ ಹಿತಕ್ಕಾಗಿ ನಿಲ್ಲಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ ಮಾತನಾಡಿದರು. ಸಂಘದ ರಾಜ್ಯ ಪದಾಧಿಕಾರಿಗಳಾದ ಅಬ್ಬಿಗೆರೆ ಮಂಜುನಾಥ, ರಾಮಕೃಷ್ಣ ಮಾಮರ, ಡಾ.ಬಿ.ವಾಸುದೇವ, ಜಿಲ್ಲಾಧ್ಯಕ್ಷ ಸುರೇಶ ಕುಣಿಬೆಳಕೆರೆ, ವರದಿಗಾರರ ಕೂಟದ ನಿಕಟ ಪೂರ್ವ ಅಧ್ಯಕ್ಷ ಕೆ.ಏಕಾಂತಪ್ಪ, ಎ.ಫಕೃದ್ದೀನ್, ಗೋವಿಂದರಾಜ ಇತರರು ಇದ್ದರು.

ಇದೇ ವೇಳೆ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಪಾತ್ರಕರಾದ ರಮೇಶ ಜಹಗೀರದಾರ್‌, ಎ.ಎಲ್. ತಾರಾನಾಥ, ಡಾ.ಕೆ.ಜೈಮುನಿ, ಮಾನ್ಯತಾ ಸಮಿತಿಗೆ ಸದಸ್ಯರಾದ ಯಳನಾಡು ಮಂಜುನಾಥ ಅವರಿಗೆ ಸನ್ಮಾನಿಸಲಾಯಿತು.

ಸಪ್ತರ್ಷಿ ಯೋಗ ಅಕಾಡೆಮಿಯ ಅಂತಾರಾಷ್ಟ್ರೀಯ ಯೋಗಪಟುಗಳಾದ ಕು.ಶ್ರೇಯಾ, ಕು.ಪೂಜಾ, ಕು.ಅನನ್ಯ ಯೋಗ ನೃತ್ಯ ಪ್ರದರ್ಶಿಸಿದರು. ಹಿರಿಯ ಪತ್ರಕರ್ತರಾದ ದೇವಿಕಾ ಸುನಿಲ್, ಟಿ.ಜಿ.ಶಿವಮೂರ್ತಿ, ವೇದಮೂರ್ತಿ ಕಾರ್ಯಕ್ರಮ ನಡೆಸಿಕೊಟ್ಟರು. 

Share this article