ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶಿಕ್ಷಣದೊಂದಿಗೆ ನಮ್ಮ ಮೂಲ ಕಸಬು ಮರೆಯದೇ ಗೌರವಿಸಿ, ಉಳಿಸಿಕೊಂಡು ಬರಬೇಕು. ಇಂದಿನ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಸುಂದರ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪಾಲಕರು ಜಾಗೃತರಾಗಿ ತಮ್ಮ ಮಕ್ಕಳನ್ನು ಸರಿದಾರಿಗೆ ತರಬೇಕಾಗಿದೆ ಎಂದು ಅಬಕಾರಿ ಇಲಾಖೆ ನಿರೀಕ್ಷಕರಾದ ಆದಿನಾಥ ನರಸಗೊಂಡ ಹೇಳಿದರು.ತಾಲೂಕಿನ ಹನಗಂಡಿ ಗ್ರಾಮದ ಸರ್.ಸಿ.ವ್ಹಿ.ರಾಮನ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ೧೫ನೇ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಲಕರಾದವರು ತಮ್ಮ ಮಗು ಪ್ರತಿಯೊಂದರಲ್ಲಿ ರ‍್ಯಾಂಕ್ ಬರಲಿ ಎನ್ನುವ ಮನೋಭಾವನೆಯಿಂದ ಹೊರಗೆ ಬರಬೇಕು. ಆ ಮಗುವಿನ ಸುಪ್ತ ಆಸಕ್ತಿ ಗಮನಿಸಿ ಅದಕ್ಕೆ ಪ್ರೋತ್ಸಾಹ ನೀಡಿದಲ್ಲಿ ಮಗುವಿನಿಂದ ಸಾಧನೆ ನಿರೀಕ್ಷಿಸಬಹುದು. ಕೇವಲ ಸಾಧನೆ ಮಾಡುವುದರಿಂದ ಮಗುವಿನ ಜವಾಬ್ದಾರಿ ಮುಗಿಯುವುದಿಲ್ಲ ಆ ಮಗು ಬೆಳೆದು ದೊಡ್ಡವನಾದ ಮೇಲೆ ಸಮಾಜಕ್ಕೆ ಕೊಡುಗೆ ನೀಡುವಂತಾಗ ಬೇಕೆಂದರು.
ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿ ತಿಳಿಸಿಕೊಡಬೇಕಾಗಿದೆ. ನಮ್ಮ ಮಕ್ಕಳೆಲ್ಲರೂ ಅಧಿಕಾರಗಳಾಗಲಿ ಎಂದು ಬಯಸುತ್ತೇವೆ ಆದರೆ ಎಲ್ಲರೂ ಅಧಿಕಾರಿಗಳೇ ಆದರೆ, ನಮಗೆ ಅನ್ನ ಕೊಡೋರು ಯಾರು? ಎಂದು ಪ್ರಶ್ನಿಸಿದರು.ಅತಿಥಿ ನಿಲೇಶ ದೇಸಾಯಿ ಮಾತನಾಡಿ, ಈ ಸಂಸ್ಥೆಯು ಪ್ರತಿವರ್ಷವೂ ಉನ್ನತಿಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಚಿಕ್ಕ ಗ್ರಾಮದಲ್ಲೂ ಇಡಿ ರಾಜ್ಯವೇ ಬೆರಗುಗೊಳ್ಳುವ ರೀತಿಯಲ್ಲಿ ಸಂಸ್ಥೆ ಕಟ್ಟಿ ಬೆಳೆಸಿಕೊಂಡು ಹೋಗುತ್ತಿರುವ ಸಂಸ್ಥೆ ಅಧ್ಯಕ್ಷ ದಸ್ತಗಿರಸಾಬ ದಿಗ್ಗೇವಾಡಿ ಹಾಗೂ ಆಡಳಿತ ಮಂಡಳಿಯವರ ಕಾರ್ಯ ಶ್ಲಾಘನೀಯ. ಪ್ರಸ್ತುತ ಮಕ್ಕಳ ಮನಸ್ಥಿತಿ ಮೊಬೈಲ್ ಕೇಂದ್ರೀಕೃತವಾಗಿದೆ. ಅವರ ಭವಿಷ್ಯ ಹೇಗೆ ರೂಪಗೊಂಡಿತು? ಪಾಲಕರು ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳುಗೆಡಹದೇ ಮೊಬೈಲ್ ಬದಲಾಗಿ ಪುಸ್ತಕ ಕೊಡಬೇಕೆಂದರು.
ದಿವ್ಯ ಸಾನ್ನಿಧ್ಯವಹಿಸಿದ ಷ.ಬ್ರ.ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಎಂ.ಎಸ್.ಗಡೆನ್ನವರ ಮಾತನಾಡಿದರು. ವೇದಿಕೆಯಲ್ಲಿ ಪಾಯಪ್ಪ ದೇಸಾಯಿ, ಬಾಗಪ್ಪ ಹನಗಂಡಿ, ಎಸ್.ಬಿಜಾಪೂರ, ಎಸ್. ಕೊಕಟನೂರ, ಪ್ರಭು ತಂಬೂರಿ, ಎಸ್.ಮೋಮಿನ ಎಮ.ಗುಂಜಟ್ಟಿ, ಇನ್ನೂಸ ನಿಪ್ಪಾಣಿ, ಅಬುಲಹಸನ್ ಪಕಾಲಿ ಸೇರಿದಂತೆ ಅನೇಕ ಮುಖಂಡರು ಇದ್ದರು. ಶ್ರೀಶೈಲ ಗಿರಿಸಾಗರ ಸ್ವಾಗತಿಸಿದರು, ಜ್ಯೋತಿ ಉಮದಿ, ಬಸೀರಾ ಜಮಾದಾರ ಹಾಗೂ ಇಬ್ರಾಹಿಂ ಚಿಣಗಿ ನಿರೂಪಿಸಿದರು. ಸುವರ್ಣಾ ಗಿರಿಸಾಗರ ವಂದಿಸಿದರು.