ಕನ್ನಡಪ್ರಭ ವಾರ್ತೆ ಬೆಂಗಳೂರು:
ಗದಗದಿಂದ ಆಗಮಿಸಿ ನಿರಂತರ 10 ದಿನದಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಂಜುಳಾ (45), ಹಾಸನದ ಮತ್ತೊಬ್ಬ ಮಹಿಳೆ ಅಸ್ವಸ್ಥರಾಗಿದ್ದು, ಅವರನ್ನು ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದ ಒತ್ತಡದಲ್ಲಿ ಏರುಪೇರಾಗಿ ಅಸ್ವಸ್ಥರಾಗಿರುವುದಾಗಿ ವೈದ್ಯರು ತಿಳಿಸಿದರು.
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬಿಸಿ ದಿನೇ ದಿನೆ ಹೆಚ್ಚಾಗುತ್ತಿದ್ದಂತೆಯೇ ಸರ್ಕಾರದ ಸಹನೆ ಮೀರುತ್ತಿರುವ ಲಕ್ಷಣ ಗೋಚರಿಸಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ ಆಶಾ ಕಾರ್ಯಕರ್ತೆಯರ ಸೇವೆ ಇಲ್ಲದಿದ್ದರೂ ಸಮಾಜದ ಆರೋಗ್ಯ ಸುಸ್ಥಿರವಾಗಿಯೇ ಇರಲಿದೆ ಎಂಬರ್ಥದ ಹೇಳಿಕೆ ನೀಡಿದರು. ಇನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಬ್ಲ್ಯಾಕ್ ಮೇಲ್ ಮಾಡದಂತೆ ಆಶಾ ಕಾರ್ಯಕರ್ತೆಯರಿಗೆ ನೇರ ಎಚ್ಚರಿಕೆಯನ್ನೂ ನೀಡಿದರು.ಮುರಿದು ಬಿದ್ದ ಸಂಧಾನ:
ಮುಖಂಡರಾದ ನಾಗಲಕ್ಷ್ಮಿ ಹಾಗೂ ಮುಖಂಡರು ಜಿ.ಸಿ.ಚಂದ್ರಶೇಖರ್ ಅವರ ಬಳಿ ತೆರಳಿ ಎಲ್ಲ ಬೇಡಿಕೆಗಳನ್ನು ವಿವರಿಸಿದರು. ಎಂಟು ಬೇಡಿಕೆಗಳಲ್ಲಿ ಏಳು ಬೇಡಿಕೆಗಳನ್ನು ಈಡೇರಿಸುವುದಾಗಿ ಚಂದ್ರಶೇಖರ್ ಒಪ್ಪಿಕೊಂಡರು. ಆದರೆ, ವೇತನ ₹15,000 ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಅವರ ಜೊತೆ ಮಾತನಾಡಬೇಕು ಎಂದು ಹೇಳಿದರು. ಆದರೆ, ರಾತ್ರಿಯಾದರೂ ಈ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ಪ್ರತಿಭಟನೆ ಮುಂದುವರಿಯುತ್ತದೆ ಎಂದು ನಾಗಲಕ್ಷ್ಮಿ ಸ್ಪಷ್ಟಪಡಿಸಿದರು.
ಆರೋಗ್ಯ ಸಚಿವ ಯು.ಟಿ.ಖಾದರ್ ಸೇರಿ ಕಾಂಗ್ರೆಸ್ ನ ಹಲವು ಮುಖಂಡರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟ ಕೇಂದ್ರ ಸರ್ಕಾರದ ವಿರುದ್ಧದ ದೂರುಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆಶಾಕಾರ್ಯಕರ್ತೆಯರ ಸಂಘಟನೆ ಮುಖಂಡರಾದ ರಮಾ ಹಾಗೂ ಡಿ.ನಾಗಲಕ್ಷ್ಮಿ ಅವರು, ಸಚಿವ ಯು.ಟಿ.ಖಾದರ್ ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ಸೇವೆಗೆ ಯಾವುದೇ ತೊಂದರೆಯಾಗಿಲ್ಲ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ಅವರು ಸ್ಥಳೀಯವಾಗಿ ಸಮಸ್ಯೆಗಳನ್ನು ನೋಡಲಿ, ಹೆರಿಗೆಗೆ ಗರ್ಭಿಣಿಯರನ್ನು ಕರೆದೊಯ್ಯುವವರಿಲ್ಲ. ಆ್ಯಂಬುಲೆನ್ಸ್ ಕರೆಸುವವರು ಇಲ್ಲ, ಅಲ್ಲಿ ನರ್ಸ್ ಇರುವುದಿಲ್ಲ. ಕೇವಲ ಆಶಾಗಳು ಮಾತ್ರ ಇರುತ್ತಾರೆ. ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಲಸಿಕೆಯಿಂದ ಆರಂಭವಾಗಿ ಎಲ್ಲ ಹಂತಗಳಲ್ಲೂ ಆಶಾ ಕಾರ್ಯಕರ್ತೆಯರೇ ಇರಬೇಕು. ಈಗ ಅದು ಅಸ್ತವ್ಯಸ್ತವಾಗಿದೆ. ಅದು ಸಚಿವರಿಗೆ ಗೊತ್ತಿಲ್ಲ, ಎಲ್ಲ ಗ್ರಾಮಗಳಿಗೂ ನರ್ಸ್‌ಗಳು, ಡಾಕ್ಟರ್‌ಗಳು ಹೋಗಲು ಸಾಧ್ಯವಿಲ್ಲ. ಇದು ಸಚಿವರಿಗೆ ಗೊತ್ತಿಲ್ಲ ಎಂದು ವಿವರಿಸಿದರು.
ಸಂಘಟನೆಗಳು, ಮುಖಂಡರ ಬೆಂಬಲ:
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಿಪಬ್ಲಿಕ್ ಆಫ್ ಬಳ್ಳಾರಿಯನ್ನೇ ಛಿದ್ರ ಮಾಡಿ ಆರೋಪಿಗಳನ್ನು ಜೈಲಿಗೆ ಹಾಕಿಸಿದ್ದು ಹೋರಾಟದಿಂದಲೇ. ಸರ್ಕಾರ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಮುಂದುವರಿಸಿ, ನಮ್ಮ ಬೆಂಬಲ ನಿಮಗೆ ಇರುತ್ತದೆ ಎಂದರು.
ಕಿರುತೆರೆ ಕಲಾವಿದೆ ಚಿತ್ರಾ ರಂಗಸ್ವಾಮಿ ಹಾಗೂ ನಿರ್ದೇಶಕ ನವೀನ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಆಶಾಕಾರ್ಯಕರ್ತೆಯರ ಕುರಿತು ರಚಿಸಿ ಸಂಗೀತ ನಿರ್ದೇಶಿಸಿ, ‘ನಮಗೂ ಒಂದು ಬದುಕಿದೆ ಅಯ್ಯಾ.. ಪರರ ನೋವಿಗೆ ಮಿಡಿಯುವ ಹೃದಯಾ...’ ಎಂಬ ಹಾಡು ಹೇಳಿದರು.