ದೈನಂದಿನ ದುಡಿಮೆ ಬಿಟ್ಟು ಪಡಿತರಕ್ಕಾಗಿ ಕಾಯುವ ಜನರು । ಮಹಿಳೆಯರು, ವೃದ್ಧರು ಹಾಗೂ ಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆ
ಸರ್ಕಾರ ನೀಡುವ ಉಚಿತ ಪಡಿತರವನ್ನು ಪಡೆದುಕೊಳ್ಳಲು ಬಡ ಜನರು ದಿನವಿಡೀ ಕಾಯಬೇಕಾದ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ತೀವ್ರವಾಗಿದ್ದು, ಪಡಿತರ ವಿತರಣೆಗೆ ಅಡ್ಡಿಯಾಗುತ್ತಿದೆ. ಇದರಿಂದ ಕೂಲಿ ಕೆಲಸಕ್ಕೆ ಹೋಗಬೇಕಾದ ಜನರು ತಮ್ಮ ದೈನಂದಿನ ದುಡಿಮೆಯನ್ನು ಬಿಟ್ಟು ಪಡಿತರಕ್ಕಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ.
ಬಡ ಮತ್ತು ಕೂಲಿ ಕಾರ್ಮಿಕ ಕುಟುಂಬಗಳಿಗೆ ಸರ್ಕಾರದ ಪಡಿತರವೇ ಪ್ರಮುಖ ಆಸರೆಯಾಗಿದೆ. ಆದರೆ, ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗಳಿಗೆ ಬಂದರೆ ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದೆ ವಿತರಣೆ ವಿಳಂಬವಾಗುತ್ತಿದೆ. ಬೆಳಗ್ಗೆಯಿಂದಲೇ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತರೂ ಪಡಿತರ ಸಿಗುವ ಖಚಿತತೆ ಇಲ್ಲದಂತಾಗಿದೆ. ಇದರಿಂದ ಮಹಿಳೆಯರು, ವೃದ್ಧರು ಹಾಗೂ ಕೂಲಿ ಕಾರ್ಮಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಈ ಕುರಿತು ಮಾತನಾಡಿದ ಪಡಿತರ ಚೀಟಿದಾರರು, ನಾವು ದಿನಗೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಬಡವರು. ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ನಮ್ಮ ಕುಟುಂಬದ ಊಟಕ್ಕೂ ತೊಂದರೆಯಾಗುತ್ತದೆ. ಪಡಿತರ ಪಡೆಯಲು ಬೆಳಗ್ಗೆಯೇ ನ್ಯಾಯಬೆಲೆ ಅಂಗಡಿಗೆ ಬಂದರೂ ಸರ್ವರ್ ಸಮಸ್ಯೆಯಿಂದ ದಿನವಿಡೀ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಕೂಲಿ ಕೆಲಸ ಬಿಟ್ಟು ಪಡಿತರಕ್ಕಾಗಿ ಕಾಯುವುದರಿಂದ ನಮ್ಮ ದಿನದ ದುಡಿಮೆ ನಷ್ಟವಾಗುತ್ತಿದೆ. ಸರ್ಕಾರ ಬಡವರಿಗೆ ಪಡಿತರ ನೀಡುತ್ತಿದೆ, ಆದರೆ ಅದನ್ನು ಪಡೆಯಲು ಇಷ್ಟೊಂದು ಪರದಾಡಬೇಕಾದರೆ ಹೇಗೆ? ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರ್ವರ್ ಸಮಸ್ಯೆ ಬಗೆಹರಿಸಿ, ಜನರಿಗೆ ಯಾವುದೇ ತೊಂದರೆಯಾಗದಂತೆ ಪಡಿತರ ವಿತರಣೆ ಮಾಡಬೇಕು ಎಂದು ತಮ್ಮ ಅಳಲು ತೋಡಿಕೊಂಡರು.
ಪಡಿತರ ಪಡೆಯಲು ಜನರು ದಿನವಿಡೀ ಕಾಯುವ ಪರಿಸ್ಥಿತಿ ಮುಂದುವರಿದರೆ, ಬಡ ಕುಟುಂಬಗಳ ಜೀವನ ನಿರ್ವಹಣೆಗೆ ಮತ್ತಷ್ಟು ತೊಂದರೆಯಾಗಲಿದೆ. ಕೂಲಿ ಕಾರ್ಮಿಕರ ಸಮಯ ಮತ್ತು ದುಡಿಮೆಗೆ ಬೆಲೆ ನೀಡುವ ನಿಟ್ಟಿನಲ್ಲಿ ಸರ್ವರ್ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಅಗತ್ಯವಿದೆ.
ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಮೇಲಾಧಿಕಾರಿಗಳಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ಬರುತ್ತಿಲ್ಲ. ಬೆಳಿಗ್ಗೆಯಿಂದ ರಾತ್ರಿ 11.59ರವರೆಗೂ ಪಡಿತರ ವಿತರಣೆ ಮಾಡಲು ಆದೇಶಿಸಿದ್ದಾರೆ. ಸರ್ವರ್ ಸಮಸ್ಯೆಯಿಲ್ಲವಾದರೇ ನಾವು ಇಡೀ ರಾತ್ರಿ ಪಡಿತರ ನೀಡುತ್ತೇವೆ. ಸರ್ವರ್ ಇಲ್ಲ ಅಂದ್ರೆ ಇಡೀ ದಿನ ಕಾದರೂ ಯಾವುದೇ ಪ್ರಯೋಜನವಿಲ್ಲ.
26ಜಿಯುಡಿ2: ಗುಡಿಬಂಡೆ ತಾಲೂಕಿನಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಜನರು ಪರದಾಡುತ್ತಿದ್ದಾರೆ.