ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಂವಿಧಾನ ದಿನದ ಅಂಗವಾಗಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ನಗರದ ರಾಮಸಮುದ್ರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಬಹಳ ಹೀನಾಯವಾಗಿ ನಡೆಸಿಕೊಂಡಿತ್ತು. ಅವರನ್ನು ಸೋಲಿಸುವ ಮೂಲಕ ಸಂವಿಧಾನ ರಚನೆ ಮಾಡಿದ ವಿಶ್ವಜ್ಞಾನಿಯನ್ನೇ ಸಂವಿಧಾನ ಜಾರಿ ಮಾಡುವ ಸಂಸತ್‌ಗೆ ಹೋಗಲು ಬಿಡಲಿಲ್ಲ. ಡಾ. ಅಂಬೇಡ್ಕರ್ ಅವರಿಗೆ ಜೀವಿತ ಅವಧಿಯಲ್ಲಿ ತೊಂದರೆ ನೀಡುವ ಜೊತೆಗೆ ಅವರ ನಿಧನ ಬಳಿಕವೂ ದೆಹಲಿಯಲ್ಲಿ ಅವರ ಅಂತ್ಯಕ್ರಿಯೆಗೆ ಅವಕಾಶ ಮಾಡಿ ಕೊಡದ ಕಾಂಗ್ರೆಸ್ಸಿಗರು ಈಗ ನಾವು ಸಂವಿಧಾನ ಮತ್ತು ಅಂಬೇಡ್ಕರ್ ಅವರ ರಕ್ಷಕರು ಎಂದು ಹೇಳಿಕೊಳ್ಳುವುದು ಹಾಸ್ಯಸ್ಪದವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರವೇ ಅಂಬೇಡ್ಕರ್ ಅವರು ಸಂವಿಧಾನ ಸಮರ್ಪಣೆ ಮಾಡಿದ್ದ ನ. ೨೬ ರನ್ನು ಸಂವಿಧಾನ ದಿನ ಎಂದು ಘೋಷಣೆ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಇದು ಕಾನೂನು ದಿನವಾಗಿತ್ತು. ಅಧಿಕಾರ ಇದ್ದಾಗಲೆಲ್ಲ ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳಿಗೆ ತೊಂದರೆ ನೀಡಿದ ಕಾಂಗ್ರೆಸ್ ಈಗ ಅಧಿಕಾರಕ್ಕಾಗಿ ಸಂವಿಧಾನದ ಪುಸ್ತಕವನ್ನು ಹಿಡಿದು ಓಡಾಡುತ್ತಿದೆ ಎಂದು ವ್ಯಂಗ್ಯವಾಡಿದರು.ದೇಶದ ಜನರು ಪ್ರಜ್ಞಾವಂತರಾಗಿದ್ದಾರೆ. ದೇಶವನ್ನು ಮುನ್ನಡೆಸುವ ಶಕ್ತಿಯನ್ನು ಹೊಂದಿರುವವರು ಯಾರು ಎಂದು ಚಿಂತಿಸಿ ಮತ ಹಾಕುತ್ತಿದ್ದಾರೆ. ಹೀಗಾಗಿ ದೇಶದ ಅಭಿವೃದ್ದಿಯಲ್ಲಿ ಹಾಗೂ ಸಂವಿಧಾನವನ್ನು ಜಾರಿ ಮಾಡಿ ಎಲ್ಲಾ ವರ್ಗದವರಿಗೂ ಅವಕಾಶ ನೀಡುವ ಜೊತೆಗೆ ಸಂವಿಧಾನ ದಿವಸ್ ಘೋಷಣೆ ಮಾಡಿ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಬಿಜೆಪಿ ತಮ್ಮನ್ನು ತೊಡಗಿಸಿಕೊಂಡಿದೆ ಎಂದು ನಿರಂಜನ್‌ಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ನವೀನ್ ಮೌರ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ, ಡಾ. ಎ.ಆರ್. ಬಾಬು, ಜಿಲ್ಲಾ ವಕ್ತಾರ ಮನೋಜ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ರಾಮಸಮುದ್ರ, ನಗರ ಘಟಕದ ಅಧ್ಯಕ್ಷ ಶಿವರಾಜ್, ಹೇಮಂತ್, ತಾಲೂಕು ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಕೂಸಣ್ಣ, ವಿರಾಟ್ ಶಿವು, ನಗರಸಭಾ ಮಾಜಿ ಸದಸ್ಯೆ ಕುಮುದ, ವೇಣುಗೋಪಾಲ್, ಕಿಲಗರೆ ಬಸವರಾಜು, ಶುಭೋದಯ ಸಿದ್ದರಾಜು ಮೊದಲಾದವರು ಇದ್ದರು.