ಕನ್ನಡಪ್ರಭ ವಾರ್ತೆ ಹಳೇಬೀಡು
ರಾಜ್ಯದಲ್ಲಿ ಅಭಿವೃದ್ಧಿ ಇದ್ದರೆ ತಾನೇ ಕುಂಠಿತ ಆಗೋಕೆ. ಗುಂಡಿ ಮುಚ್ಚಲು ಕೂಡ ಅನುದಾನ ಕೊಡ್ತಾ ಇಲ್ಲ. ಆಡಳಿತ ಪಕ್ಷದ ಶಾಸಕರೇ ರಾಜೀನಾಮೆ ಕೊಡುವ ಹಂತಕ್ಕೆ ಹೋಗಿದ್ದಾರೆ. ರಾಜ್ಯದ ರೈತರ ಬಗ್ಗೆ ಇವರಿಗೆ ಕಿಂಚಿತ್ತು ಕಾಳಜಿ ಇಲ್ಲ. ಸಿದ್ದರಾಮಯ್ಯ ಅವರನ್ನುಕೆಳಗಿಳಿಸಲು ಒಂದಷ್ಟು ಜನ, ಸಿಎಂ ಅವರ ಪರ ಇನ್ನೊಂದಷ್ಟು ಜನ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ಧಾಳಿ ನಡೆಸಿದರು.ಹಳೆಬೀಡು ಸಮೀಪ ಪುಷ್ಪಗಿರಿ ಮಠದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾದ್ಯಮದೊಂದಿಗೆ ಮಾತನಾಡುತ್ತ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರಿಗೆ ಪಾಪ ಏನು ಗೊತ್ತಿಲ್ಲ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರಾ ಎನ್ನುವ ಪ್ರಶ್ನೆ ಮಾಡುವಂತಾಗಿದೆ. ಗೃಹ ಸಚಿವರು ನಿಸ್ಸಹಾಯಕರಾಗಿದ್ದಾರೆ. ಇದರ ನಡುವೆ ಕೆಲವರು ಸಿಎಂ ಕುರ್ಚಿಗೆ ಟವಲ್ ಹಾಕಿಕೊಂಡು ಕೂತಿದ್ದಾರೆ. ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಕಳೆದ ಎರಡೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗಾಗಿ ಯಾವುದೇ ಅನುದಾನ ನೀಡಿಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಎಂತಹ ಕೆಟ್ಟ ಪರಿಸ್ಥಿತಿಗೆ ಬಂದಿದೆ. ಬಹಿರಂಗವಾಗಿಯೇ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಹೋರಾಟ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಮಾಡಲು ಹೋರಾಟ ನಡೆಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕರ ಅಸಮಾಧಾನದ ಲಾಭ ಪಡೆಯುವ ಅವಶ್ಯಕತೆ ನಮಗಿಲ್ಲ. ರಾಜ್ಯದ ಮತದಾರರು ನಮ್ಮನ್ನ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಈ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವನ್ನು ನಿರ್ವಹಿಸುತ್ತೇವೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ಮರೆತಿದ್ದಾರೆ. ಇಡೀ ಮಂತ್ರಿಮಂಡಲ ದೆಹಲಿಯಲ್ಲಿ ಕುಳಿತಿದೆ. ರಾಜ್ಯದ ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸುತ್ತಿಲ್ಲ. ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುತ್ತಿಲ್ಲ. ರೈತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಬಿಹಾರ ರಾಜ್ಯದ ಚುನಾವಣೆ ಫಲಿತಾಂಶದ ನಂತರ ನಮ್ಮ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ರಣೋತ್ಸಾಹ ಬಂದಿದೆ. ರಾಜ್ಯದಲ್ಲಿ ಯಾವಾಗಲೇ ಚುನಾವಣೆ ನಡೆದರೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎನ್ನುವ ವಾತಾವರಣ ಪೂರಕವಾಗಿದೆ. ನಮ್ಮ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಒಟ್ಟಾಗಿ, ಒಂದಾಗಿ ಬಲ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯರು, ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಪ್ರೀತಮ್ ಗೌಡ, ಕೆ.ಎಸ್. ಲಿಂಗೇಶ್, ಮಠದ ಕಾರ್ಯದರ್ಶಿ ಗ್ರಾನೈಟ್ ರಾಜ್‌ಶೇಖರ್, ಹೈಕೋರ್ಟ್ ವಕೀಲ ಪಾಟೀಲ್ ಹಾಜರಿದ್ದರು.