)
ಕನ್ನಡಪ್ರಭ ವಾರ್ತೆ ಸಿಂಧನೂರು
ಅವರು ಸಿಂಧನೂರಿನ ಮಹಾತ್ಮಗಾಂಧಿ ವೃತ್ತದಲ್ಲಿ ಗುರುವಾರ ಮೂರನೇ ದಿನದ ಪಾದಯಾತ್ರೆಯ ಬಹಿರಂಗ ಸಭೆಯನ್ನುದ್ಧೇಶಿಸಿ ಮಾತನಾಡಿದರು. ಈ ಸರ್ಕಾರ ಕಳೆದ ಮೂರುವರೆ ವರ್ಷಗಳಿಂದ ಬರೀ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಹಗರಣಗಳಲ್ಲಿ ತೊಡಗಿದೆ. ರೈತರ ಸಂಕಷ್ಟದ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡುತ್ತಿಲ್ಲ. ರಾಜ್ಯದಲ್ಲಿ 3655 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 980 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಪರಿಹಾರ ಕಲ್ಪಿಸಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜೋಳದ ಬೆಳೆ ಬೆಳೆದ ರೈತರ ರು.148 ಕೋಟಿ ಬಾಕಿ ಹಣವನ್ನು ಪಾವತಿ ಮಾಡಿಲ್ಲ. ಇದು ರೈತ ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿಯಾದಾಗ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿಯತ್ತ ರಾಜ್ಯ ವನ್ನು ಕೊಂಡೊಯ್ದರು. ಹೈನುಗಾರಿಕೆಗೆ ಆದ್ಯತೆ ನೀಡಿದ್ದರು. ಈ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಆಧುನೀಕರಣ ಮಾಡಿಸಿದರು. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ರೂ.14 ಕೋಟಿ ಹಣವನ್ನು ಬಜೆಟ್ನಲ್ಲಿ ತೆಗೆದಿರಿಸಿ ಡಿ.ಪಿ.ಆರ್. ಸಿದ್ಧಪಡಿಸಿದರು. ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಮಾನಾಂತರ ಜಲಾಶಯದ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಹೇಳಿದರು.ಮುಖ್ಯಮಂತ್ರಿಗಳು ರಿಯಲ್ ಎಸ್ಟೇಟ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಇವರು ಒಳ್ಳೆಯ ಆಡಳಿತಗಾರರಲ್ಲ. ಆದರೆ ಬಿಸಿನೆಸ್ ಮೆನ್ ಎಂದ ವಿಜಯೇಂದ್ರ ಯಾವ ಜಮೀನನ್ನು ವೀಕ್ಷಣೆ ಮಾಡಲಿಲ್ಲ. ಬರಗಾಲದ ಕುರಿತು ರೈತರೊಂದಿಗೆ ಚರ್ಚೆ ಮಾಡಲಿಲ್ಲ. ಬದಲಾಗಿ ಎ.ಸಿ., ಡಿ.ಸಿ.ಗಳೊಂದಿಗೆ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ವಿಡಿಯೋ ಕಾನ್ಫ್ರೆನ್ಸ್ ಮೂಲಕ ರಾಜ್ಯದಲ್ಲಿ 101 ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದ್ದಾರೆ. ಇನ್ನು ಅನೇಕ ತಾಲ್ಲೂಕುಗಳು ಬರಗಾಲ ಅನುಭವಿಸುತ್ತಿವೆ. ಅದರಲ್ಲಿ ಸಿಂಧನೂರು ತಾಲ್ಲೂಕು ಸಹ ಒಂದಾಗಿದೆ. ಈ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವಾಲ್ಮೀಕಿ ಹಗರಣದ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಪಾದಯಾತ್ರೆ ಶುರುವಾದ ಬೆನ್ನಲ್ಲೇ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟರು. ಇದು ಮೊದಲ ವಿಕೆಟ್ ಆಗಿದೆಯಷ್ಟೆ. ಇನ್ನು ಕೆ.ಪಿ.ಎಸ್.ಸಿ. ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನು ಅನೇಕ ಸಚಿವರು ಸಹ ರಾಜೀನಾಮೆ ನೀಡುವ ಕಾಲ ದೂರವಿಲ್ಲ. 2028ರ ಚುನಾವಣೆಯಲ್ಲಿ ಈ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೊಗೆಯಬೇಕು ಎಂದು ಕರತಾಡನಗಳ ಮಧ್ಯೆ ಹೇಳಿದರು.
ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿ ವಿಜಯೇಂದ್ರ ಅವರು ನಡೆಸುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಯಾಗಿದೆ. ಸರ್ಕಾರ ನಿದ್ದೆಗಣ್ಣಿನಿಂದ ಈಗ ಹೊರಬರುತ್ತಿದೆ. ಇನ್ನು 7 ದಿನಗಳ ಕಾಲ ನಡೆಯುವ ಪಾದಯಾತ್ರೆ ಅನೇಕ ಬದಲಾವಣೆಗಳಿಗೆ ಕಾರಣವಾಗಲಿದೆ ಎಂದು ಹೇಳಿದರು.
ಮತ್ತೋರ್ವ ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಮಾತನಾಡಿ, ಈ ಪಾದಯಾತ್ರೆ ಹಾಗೂ ಬಹಿರಂಗ ಸಮಾವೇಶ ತಾಲೂಕಿನ ಗೌಡರಿಗೆ ಎದೆ ನಡುಗಿಸುವಂತಾಗಿದೆ. ಕಳೆದ ನಾಲ್ಕು ದಶಕಗಳಿಂದ ಸಿಂಧನೂರು ತಾಲ್ಲೂಕಿನಲ್ಲಿ ಕೆ.ಕರಿಯಪ್ಪನವರು ಬಡವ, ದೀನದಲಿತರ ಅಭಿವೃದ್ಧಿಗಾಗಿ ಕಂಕಣಬದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ತಾಲ್ಲೂಕಿನ ಶಾಸಕರನ್ನಾಗಿ ಜನತೆ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.
ಎಂ.ಎಲ್.ಸಿ ಹೇಮಲತಾ ನಾಯಕ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಮುಖಂಡರಾದ ಕೆ.ಕರಿಯಪ್ಪ, ಎಂ.ದೊಡ್ಡಬಸವರಾಜ, ಹರೀಶ್ ಪೂಂಜಾ, ಶರಣು ತಳ್ಳಿಕೇರಿ, ಶೈಲೇಂದ್ರ, ಬಂಗಾರು ಹನುಮಂತ, ಬಸವರಾಜ ಕ್ಯಾವಟರ್, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ರಾಮತ್ನಾಳ, ನಗರ ಮಂಡಲ ಅಧ್ಯಕ್ಷ ಸಿದ್ರಾಮೇಶ ಮನ್ನಾಪುರ, ರಾಜೇಶ ಹಿರೇಮಠ, ಸಹನಾ ಹಿರೇಮಠ ಪಾಲ್ಗೊಂಡಿದ್ದರು.