ಇತಿಹಾಸ ಪ್ರಸಿದ್ಧ ಪಟ್ಟಲದಮ್ಮನ ದೇವಿ ಸಿಡಿಹಬ್ಬಕ್ಕೆ ಅದ್ಧೂರಿ ಚಾಲನೆ

KannadaprabhaNewsNetwork |  
Published : Jan 31, 2026, 01:45 AM IST
30ಕೆಎಂಎನ್ ಡಿ21,22 | Kannada Prabha

ಸಾರಾಂಶ

ಮಳವಳ್ಳಿ ಪಟ್ಟಣದ ಕೊಳ್ಳೇಗಾಲ ರಸ್ತೆ, ಮೈಸೂರು ರಸ್ತೆ, ಮದ್ದೂರು ರಸ್ತೆ, ಪೇಟೆ ಬೀದಿ, ಸುಲ್ತಾನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ ವಿದ್ಯುತ್ ದೀಪಾಲಂಕಾರ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಗಮನ ಸೆಳೆದ್ದವು. ಪ್ರವಾಸಿ ಮಂದಿರ ಬಳಿ ಶುಕ್ರವಾರ ಸಂಜೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಎಲ್ಲ ಸಮುದಾಯಗಳ ಜನರು ಒಗ್ಗಟ್ಟಿನಿಂದ ಆಚರಿಸುವ ಪಟ್ಟಣದಲ್ಲಿ ಇತಿಹಾಸ ಪ್ರಸಿದ್ಧ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಶುಕ್ರವಾರ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ಪಟ್ಟಣದ ಸುಲ್ತಾನ್ ರಸ್ತೆಯ ವಳಗೆರೆ ಹುಚ್ಚಮ್ಮ ಹಾಗೂ ಪಟ್ಟಲದಮ್ಮ ದೇವರಿಗೆ ಬೆಳಗಿನ ಜಾವದಿಂದಲೇ ವಿವಿಧ ಹೋಮ-ಹವನ ಮತ್ತು ಅಭಿಷೇಕ ಸೇರಿದಂತೆ ಹಲವು ಪೂಜಾ ಕೈಂಕರ್ಯ ನೆರವೇರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಆವರಣವನ್ನು ಹಸಿರು ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಿಸಲಾಗಿತ್ತು. ಪಟ್ಟಣದ ಸೇರಿದಂತೆ ಹಲವು ಗ್ರಾಮಗಳ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಸರದಿ ಸಾಲಿನಲ್ಲಿ ತೆರಳಿ ಚಿಕ್ಕಮ್ಮ ತಾಯಿ ಮತ್ತು ದೊಡ್ಡಮ್ಮ ತಾಯಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಪಟ್ಟಣದ ಕೊಳ್ಳೇಗಾಲ ರಸ್ತೆ, ಮೈಸೂರು ರಸ್ತೆ, ಮದ್ದೂರು ರಸ್ತೆ, ಪೇಟೆ ಬೀದಿ, ಸುಲ್ತಾನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ ವಿದ್ಯುತ್ ದೀಪಾಲಂಕಾರ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಗಮನ ಸೆಳೆದ್ದವು. ಪ್ರವಾಸಿ ಮಂದಿರ ಬಳಿ ಶುಕ್ರವಾರ ಸಂಜೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಿದರು.

ಶುಕ್ರವಾರ ಸಂಜೆ ತಾಲೂಕಿನ ತಮ್ಮಡಹಳ್ಳಿ, ಕ್ಯಾತೇಗೌಡನದೊಡ್ಡಿ, ಮಾರೇಹಳ್ಳಿ, ಪಟ್ಟಣದ ಪೇಟೆ ಬೀದಿ ಸೇರಿದಂತೆ ವಿವಿಧ ಗ್ರಾಮಗಳ ಹಾಗೂ ಪಟ್ಟಣದ ರೈತರು ತಮಟೆ ಹಾಗೂ ಮಂಗಳವಾದ್ಯಗಳೊಂದಿಗೆ ತಮ್ಮ ರಾಸುಗಳನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಕೊಂಡಕ್ಕೆ ಸೌದೆ ತೆಗೆದುಕೊಂಡು ಹೋಗುವಾಗ ಪೇಟೆ ಬೀದಿ, ಮದ್ದೂರು ರಸ್ತೆ, ಕೋಟೆ ಬೀದಿ ಗಂಗಾಧರೇಶ್ವರಸ್ವಾಮಿ ದೇವಸ್ಥಾನ ಮೂಲಕ ಸಾಗಿದ ಸುಮಾರು 2 ಕೀ.ಲೋ.ಮೀಟರ್ ಉದ್ದದ ರಾಸುಗಳ ಮೆರವಣಿಗೆಗೆ ಜನರು ವಿಶೇಷ ಪೂಜೆ ಸಲ್ಲಿಸಿದರು. ಹಲವು ರಾಸುಗಳ ಅಲಂಕಾರ ನೋಡುಗರ ಗಮನ ಸೆಳೆದ್ದವು.

ಸಿದ್ಧಾರ್ಥನಗರದ ನಿವಾಸಿಗಳು ಸಿಡಿ ಕಟ್ಟುವುದಕ್ಕಾಗಿ ಹಗ್ಗವನ್ನು ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತೆರಳಿ ನೀಡಿದರು. ಘಟ್ಟದ ಮೆರವಣಿಗೆಯು ನಿಯಮದಂತೆ ಪೇಟೆ ಒಕ್ಕಲಿಗೇರಿ ಬೀದಿ, ಸಿದ್ದಾರ್ಥನಗರ, ಕೀರ್ಥಿನಗರ, ಗಂಗಾಮತಸ್ಥ ಬೀದಿ, ಅಶೋಕನಗರ ದೊಡ್ಡಪಾಲು, ಚಿಕ್ಕಪಾಲು, ಬಸವಲಿಂಗಪ್ಪನಗರ ಮಹಿಳೆಯರು ನಿಗದಿಪಡಿಸಿದ ಸಮಯದಲ್ಲಿ ಘಟ್ಟ ಹೊತ್ತು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಅಳವಡಿಸಿದ ಮತ್ತು ಪ್ರಮುಖವಾಗಿ ಪಟ್ಟಣದ ಪ್ರವೇಶಧ್ವಾರಗಳಲ್ಲಿನ ಹಾಗೂ ಅನಂತ್ ರಾಂ ವೃತ್ತದ ಬಳಿಯ ಹೂವಿನ ಮಾದರಿ ವಿದ್ಯುತ್ ದೀಪಾಲಂಕಾರ ಲಕ್ಷಾಂತರ ಮಂದಿಯ ಕಣ್ಮನ ಸೆಳೆಯಿತು. ಶುಕ್ರವಾರ ರಾತ್ರಿಯಿಡೀ ನಡೆಯುವ ಸಿಡಿ ಬಂಡಿ ಕಟ್ಟುವುದಕ್ಕೆ ಎಲ್ಲ ಸಮುದಾಯಗಳ ಜನರು ಸಂಪ್ರಾದಯದಂತೆ ಸಲಕರಣೆಗಳನ್ನು ನೀಡಿದರು.

ಸಿಡಿ ಹಬ್ಬದ ಪ್ರಯುಕ್ತ ಶುಕ್ರವಾರ ರಾತ್ರಿ 8.30ರ ವೇಳೆ ಆರಂಭವಾದ ಪೇಟೆ ಒಕ್ಕಲಿಗೇರಿಯ ಘಟ್ಟದ ಮೆರವಣಿಗೆಗೆ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಯುವಕರು ತಮಟೆ ತಾಳಕ್ಕೆ ಕುಣಿದು ಕುಪ್ಪಳಿಸಿದರು.

ಪ್ರತಿಯೊಂದು ಸಮುದಾಯದಿಂದ ಘಟ್ಟ ಮೆರವಣಿಗೆಗೆ ಒಂದೊಂದು ರೀತಿಯ ತಮಟೆ ವಾದ್ಯವನ್ನು ಕರೆತರಲಾಗಿತ್ತು. ಪ್ರತಿಯೊಂದು ಘಟ್ಟದ ಮೆರವಣಿಗೆಯಲ್ಲಿ ತಮ್ಮದೇ ವೈಶಿಷ್ಟದೊಂದಿಗೆ ಕುಣಿಯುವ ಮೂಲಕ ಹಬ್ಬಕ್ಕೆ ಬಂದಿದ್ದ ನೆಂಟರಿಗೆ ಉತ್ತಮ ಮನರಂಜನೆ ನೀಡಿದರು.

ಪೊಲೀಸ್ ಸರ್ಪಗಾವಲು:

ಸಿಡಿಹಬ್ಬವನ್ನು ನೋಡಲು ವಿವಿಧ ತಾಲೂಕು ಮತ್ತು ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಹಿತರ ಘಟನೆ ನಡೆಯದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಆಳವಡಿಸಲಾಗಿತ್ತು.

ಐವರು ಡಿವೈಎಸ್ಪಿ, 14 ಸಿಪಿಐ ಮತ್ತು 30 ಪಿಎಸ್ಐಗಳು, 60 ಎಎಸ್ಐ, 60 ಮಹಿಳಾ ಸಿಬ್ಬಂದಿ ಹಾಗೂ 10 ವಿವಿಧ ತುಕಡಿಗಳ ಸಿಬ್ಬಂದಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸರನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಇ.ಸಿ.ತಿಮ್ಮಯ್ಯ ನೇತೃತ್ವದಲ್ಲಿ ಭದ್ರತೆಗಾಗಿ ನೇಮಿಸಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಶುಕ್ರವಾರ ರಾತ್ರಿ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು