ಕನಕಾಚಲಪತಿ ಜಾತ್ರೆ ನಿಮಿತ್ತ ವಿಜೃಂಭಣೆಯ ಹನುಮಂತೋತ್ಸವ ಮೆರವಣಿಗೆ

KannadaprabhaNewsNetwork | Published : Mar 30, 2024 12:46 AM

ಸಾರಾಂಶ

ಕನಕಗಿರಿ ಪಟ್ಟಣದ ಆರಾಧ್ಯ ದೈವ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆಯ ೭ನೇ ದಿನವಾದ ಗುರುವಾರ ತಡರಾತ್ರಿ ಹನುಮಂತೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕನಕಗಿರಿ: ಪಟ್ಟಣದ ಆರಾಧ್ಯ ದೈವ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆಯ ೭ನೇ ದಿನವಾದ ಗುರುವಾರ ತಡರಾತ್ರಿ ಹನುಮಂತೋತ್ಸವ ವಿಜೃಂಭಣೆಯಿಂದ ನೆರವೇರಿತು.ತಡರಾತ್ರಿ ದೇವಸ್ಥಾನದಿಂದ ಆರಂಭಗೊಂಡ ಉತ್ಸವದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಯುವಕರು ರಥ ಎಳೆದು ಸಂಭ್ರಮಿಸಿದರು. ಭಾಜಾ-ಭಜಂತ್ರಿ ಮೇಳದವರು ದೇವರ ಸ್ತುತಿಗಳನ್ನು ನುಡಿಸಿ ಭಕ್ತಿಭಾವ ಮೆರೆದರು.

ರಾಜಬೀದಿಯಲ್ಲಿ ಸಾಗಿದ ಮೆರವಣಿಗೆ ಸಂದರ್ಭದಲ್ಲಿ ಜನ ಕಿಕ್ಕಿರಿದು ನಿಂತು ವೀಕ್ಷಿಸಿದರು. ವಿಶೇಷ ಮಂಗಳಾರತಿ ಮಾಡಿಸಿ ಭಕ್ತಿ ಸಮರ್ಪಿಸಿದರು. ಇನ್ನೂ ಚಿಕ್ಕಮಕ್ಕಳು, ವಯೋವೃದ್ಧರು ರಾಜಬೀದಿಯುದ್ದಕ್ಕೂ ನಿಂತು ಹನುಮಂತೋತ್ಸವ ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಂಡರು.

ಚಿತ್ರಗಾರರು, ಕಮ್ಮಾರರು, ಬಡಿಗೇರರು, ರಥ ಕಟ್ಟುವ ಕೆಲಸಗಾರರು ಒಂದು ಕಿ.ಮೀ.ಗೂ ಹೆಚ್ಚು ಸಾಗಿ ಬರುವ ಉತ್ಸವವನ್ನು ಅಚ್ಚಕಟ್ಟಾಗಿ ನಿರ್ಮಿಸಿದ್ದರು. ನಾರಿನಿಂದ ಹಗ್ಗ ತಯಾರಿಸಿ ಉತ್ಸವ ಕಟ್ಟುವುದು ಮೊದಲಿನಿಂದಲೂ ಇದೆ. ಅದರಂತೆ ನೀಲಿ, ಹಸಿರು ಹಾಗೂ ಕೆಂಪು ಬಣ್ಣದ ಬಟ್ಟೆ ಬಳಸಿ ೬೦ರಿಂದ ೭೦ ಅಡಿ ಎತ್ತರ ಹೊಂದಿದ ರಥಕ್ಕೆ ಬಣ್ಣ-ಬಣ್ಣದ ಹಾಳೆಗಳನ್ನು ಅಂಟಿಸಿದ್ದು, ನೆರೆದಿದ್ದ ಭಕ್ತರನ್ನು ಆಕರ್ಷಿಸುವಂತಿತ್ತು. ಹೂವಿನ ಹಾರ, ಧ್ವಜಗಳಿಂದ ರಥ ಶೃಂಗರಿಸಲಾಗಿತ್ತು.

ಇದಕ್ಕೂ ಮುನ್ನ ಪಲ್ಲಕ್ಕಿಯಲ್ಲಿ ಶ್ರೀದೇವಿ, ಭೂದೇವಿ ಹಾಗೂ ಕನಕಾಚಲಪತಿ ಮೂರ್ತಿಯನ್ನು ತಂದು ಯಾಜ್ಞಿಕರ ಹಾಗೂ ಅರ್ಚಕರ ಮಂತ್ರದ್ಘೋಷ ಹಾಗೂ ವಿಶೇಷ ಪೂಜೆಯೊಂದಿಗೆ ಮೆರವಣಿಗೆಗೆ ಆರಂಭಗೊಂಡಿತು. ಮೆರವಣಿಗೆಯುದ್ಧಕ್ಕೂ ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಮೊಳಗಿದವು. ಇನ್ನೂ ಕೆಲವು ಭಕ್ತರು ಹನುಮಾನ್ ಚಾಲೀಸ್ ಪಠಿಸಿ ಪ್ರಾಣ ದೇವರನ್ನು ಸ್ಮರಿಸಿದರು. ತೇರಿನ ಹನುಮಪ್ಪ ದೇವಸ್ಥಾನ ತಲುಪಿದ ರಥಕ್ಕೆ ಪೂಜೆ, ಮಂಗಳಾರತಿ ನಡೆಯಿತು. ಬಳಿಕ ರಥ ದೇವಸ್ಥಾನಕ್ಕೆ ತಲುಪಿತು.

ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಪ್ರಮುಖರಾದ ದೇಶಿಕಾಚಾರ್ಯ, ಅನಂತಕೃಷ್ಣಚಾರ್, ಕನಕರೆಡ್ಡಿ ಮಹಲನಿಮನಿ, ಜಯರಾಮರೆಡ್ಡಿ ಬೆರ‍್ಗಿ, ಕನಕಪ್ಪ ನಾಯಕ, ಅಯ್ಯನಗೌಡರೆಡ್ಡಿ, ಹನುಮಂತರೆಡ್ಡಿ ಇದ್ದರು.

Share this article