
ಕನ್ನಡಪ್ರಭ ವಾರ್ತೆ ತುಮಕೂರು
ದೈವ ದರ್ಶನಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೂ ಸುಕ್ಷೇತ್ರದ ಅಟವೀ ಶಿವಲಿಂಗ ಸ್ವಾಮೀಜಿ, ಅಟವೀ ಮಲ್ಲಿಕಾರ್ಜುನ ಸ್ವಾಮೀಜಿ, ಗುಬ್ಬಿ ತೊರೇಮಠದ ಅಟವೀ ಚನ್ನಬಸವ ಸ್ವಾಮೀಜಿಗಳು ಎಳ್ಳು, ಬೆಲ್ಲ ಹಂಚಿ ಆಶೀರ್ವಾದ ಮಾಡಿದರು.
ಅಟವೀ ಕ್ಷೇತ್ರದ ಶಿವಲಿಂಗ ಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ ಬೆಳಗ್ಗೆ 6.30ರಿಂದ ಓಂಕಾರೇಶ್ವರ ಮಹಾ ಶಿವಯೋಗಿಗಳು, ಜಡೆ ಶಾಂತ ಬಸವ ಮಹಾ ಶಿವಯೋಗಿಗಳು, ಅಟವೀ ಮಹಾ ಶಿವಯೋಗಿಗಳು, ಅಟವೀ ಸಿದ್ಧಲಿಂಗ ಮಹಾಸ್ವಾಮಿಗಳವರ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಪುಷ್ಪಾಲಂಕಾರ, ಅಷ್ಟೋತ್ತರ, ಶತಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿತು. ನಂತರ ಚಿಕ್ಕತೊಟ್ಲುಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಸುಮಂಗಲೆಯರ ಕಳಸ- ಕನ್ನಡ ಆರತಿಯೊಂದಿಗೆ ಓಂಕಾರ ಶಿವಯೋಗಿಗಳವರ ಹಾಗೂ ಅಟವೀ ಮಹಾಶಿವಯೋಗಿಗಳ ಉತ್ಸವವು ವೈಭವದಿಂದ ನಡೆಯಿತು.ವಿವಿಧ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಉತ್ಸವ ಅಟವೀ ಮಠ ತಲುಪಿತು. ಆನಂತರ ಸ್ವಾಮೀಜಿಗಳು ಷಟ್‌ಸ್ಥಳ ಧ್ವಜಾರೋಹಣ ಹಾಗೂ ನಂದಿ ಧ್ವಜ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ಶ್ರೀಗುರು ಅಟವೀಶ್ವರರ ಪಲ್ಲಕ್ಕಿ ಮಹೋತ್ಸವ ನಡೆಯಿತು.
ಶ್ರೀ ಮಠಕ್ಕೆ ಬಂದು ಮಹಾಯೋಗಿಗಳ ಗದ್ದುಗೆ ದರ್ಶನ ಮಾಡಿದರೆ ಭಕ್ತರ ಕೋರಿಕೆ ಈಡೇರುತ್ತದೆ. ಯಾವುದೇ ಸಮಸ್ಯೆ, ಕಾಯಿಲೆ ನಿವಾರಣೆ, ಸಂತಾನ ಪ್ರಾಪ್ತಿಗಾಗಿ ಸಂಕಲ್ಪ ಮಾಡಿಕೊಂಡರೆ ಹರಕೆ ಫಲಿಸುತ್ತದೆ ಎಂಬ ಭಕ್ತರ ನಂಬಿಕೆ ಅಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಅದೇ ರೀತಿ ಪ್ರತಿವರ್ಷ ಸಾವಿರಾರು ಭಕ್ತರು ಭಕ್ತಿ, ಸಂಭ್ರಮದಿಂದ ಜಾತ್ರೋತ್ಸವದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದರು.
ಸಮಿತಿಯ ಖಜಾಂಚಿ ಜಗದೀಶ್ಚಂದ್ರ, ಅಟವೀ ಜ್ಞಾನ ಪ್ರಸಾರ ಕೇಂದ್ರದ ಸಂಚಾಲಕ ಕೆ.ವಿ.ಬೆಟ್ಟಯ್ಯ, ಮುಖಂಡರಾದ ಮಹದೇವಪ್ಪ, ವಿಶ್ವನಾಥ್ ಅಪ್ಪಾಜಪ್ಪ, ಬೆಟ್ಟಲಿಂಗಯ್ಯ ಸೇರಿ ಸುತ್ತಮುತ್ತಲ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.