;Resize=(412,232))
ಬಾಗೇಪಲ್ಲಿ : ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರದ ಬ್ಯಾನರ್ ತೆರವು ಮಾಡಿದ್ದಕ್ಕೆ ಆಕ್ರೋಶಗೊಂಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಗೌಡಗೆ ಕರೆ ಮಾಡಿ, ಅಶ್ಲೀಲವಾಗಿ ನಿಂದಿಸಿದ್ದಲ್ಲದೆ ಜನರನ್ನು ದಂಗೆ ಎಬ್ಬಿಸಿ ಬೆಂಕಿ ಹಾಕಿಸುವೆ ಎಂದು ಧಮಕಿ ಹಾಕಿದ್ದಾರೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ರಾಜೀವ್ ಹೇಳಿಕೆ ಆಕ್ರೋಶ ವ್ಯಕ್ತವಾಗಿದೆ.
ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ರಾಜೀವ್ ಗೌಡ ವಿರುದ್ಧ ಪೌರಾಯುಕ್ತೆ ಅಮೃತ ಅವರು ಶಿಡ್ಲಘಟ್ಟ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಅಲ್ಲದೆ, ರಾಜೀವ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಾಗೇಪಲ್ಲಿಯ ಪುರಸಭೆ ಕಚೇರಿ ಎದುರು ಪೌರಕಾರ್ಮಿಕರು ಬುಧವಾರ ಮೌನ ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ವೇಳೆ ಅಮೃತಾ ಅವರು ಕಣ್ಣೀರಿಟ್ಟಿದ್ದಾರೆ. ವ್ಯಾಪಕ ಆಕ್ರೋಶದ ಬಳಿಕ ರಾಜೀವ್ ಗೌಡ ಪೌರಾಯುಕ್ತೆಯ ಕ್ಷಮೆಯಾಚಿಸಿದ್ದಾರೆ.
ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ ‘ಕಲ್ಟ್’ ಸಿನಿಮಾದ ಪ್ರಚಾರ ಸಭೆ ನಡೆದಿತ್ತು. ಈ ವೇಳೆ, ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಸಿನಿಮಾ ಪ್ರಚಾರದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಸಂಬಂಧ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದರು.
ಇದರಿಂದ ಆಕ್ರೋಶಗೊಂಡ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಪೌರಾಯುಕ್ತೆಗೆ ದೂರವಾಣಿ ಕರೆ ಮಾಡಿ, ಅಶ್ಲೀಲವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕವಾಗಿ ಚಪ್ಪಲಿಯಿಂದ ಹೊಡೆಸುವುದಾಗಿ, ಶಿಡ್ಲಘಟ್ಟದಿಂದ ಅಮೃತಗೌಡರನ್ನು ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಜನರನ್ನು ದಂಗೆ ಎಬ್ಬಿಸಿ ಬೆಂಕಿ ಹಚ್ಚುವುದಾಗಿ ಧಮಕಿ ಹಾಕಿದ್ದಾರೆ. ಈ ಆಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಧ್ಯೆ, ಅಶ್ಲೀಲವಾಗಿ ನಿಂದಿಸಿ, ಬೆದರಿಕೆ ಹಾಕಿರುವ ರಾಜೀವ್ ಗೌಡ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಿಡ್ಲಘಟ್ಟ ಪೊಲೀಸ್ ಠಾಣೆಗೆ ಪೌರಾಯುಕ್ತೆ ದೂರು ನೀಡಿದ್ದಾರೆ. ಇದೇ ವೇಳೆ, ಬಾಗೇಪಲ್ಲಿಯ ಪುರಸಭೆ ಕಚೇರಿ ಎದುರು ಪೌರಕಾರ್ಮಿಕರು ಬುಧವಾರ ಮೌನ ಪ್ರತಿಭಟನೆ ನಡೆಸಿ, ರಾಜೀವ್ ಗೌಡರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಆಡಿಯೋ ವೈರಲ್ ಕುರಿತಂತೆ ಮಾತನಾಡಿರುವ ರಾಜೀವ್ ಗೌಡ, ಆಡಿಯೋದಲ್ಲಿ ಮಾತನಾಡಿರುವುದು ನಾನೇ. ಆದರೆ, ಅಧಿಕಾರಿ ಜೊತೆ ಕೆಟ್ಟದಾಗಿ ಮಾತನಾಡಿಲ್ಲ. ಅಧಿಕಾರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆಗೆ ಕಾಂಗ್ರೆಸ್ ನಾಯಕ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕರೆ ಮಾಡಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ಕೂಡ ಮಹಿಳೆ ಆಗಿದ್ದೀರಿ. ಮಹಿಳಾ ಅಧಿಕಾರಿಗಳ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯಗಳನ್ನು ಸಹಿಸಬಾರದು ಎಂದಿದ್ದಾರೆ.
ಕಾನೂನು ಕ್ರಮ
ಶಿಡ್ಲಘಟ್ಟ ಅಧಿಕಾರಿಗೆ ಬೆದರಿಕೆ ಹಾಕಿದ ಯಾರೇ ಆದರೂ ಕಾನೂನಿನ ಅನ್ವಯ ಕ್ರಮವಾಗಲಿದೆ.
ಡಿ.ಕೆ.ಶಿವಕುಮಾರ್, ಡಿಸಿಎಂ