
ಕನ್ನಡಪ್ರಭ ವಾರ್ತೆ ಕಾರವಾರ
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಗಂಡು ಮಕ್ಕಳಿಗೆ ‘ಶೇಲ್’ ಸೇವೆ ನೆರವೇರಿಸಲಾಯಿತು. ಪ್ರೌಢಾವಸ್ಥೆಗೆ ಮುನ್ನ ಅರ್ಚಕರು ಗಂಡು ಮಕ್ಕಳ ಹೊಕ್ಕುಳ ಭಾಗಕ್ಕೆ ಸೂಜಿಯಿಂದ ದಾರವನ್ನು ಪೋಣಿಸಿ ಗಂಟು ಹಾಕುವ ಈ ಆಚರಣೆ, ಮುಂದಿನ ಜೀವನದಲ್ಲಿ ಸಂಭವಿಸಬಹುದಾದ ಅಪಘಾತ ಹಾಗೂ ಅವಘಡಗಳಿಂದ ರಕ್ಷಣೆಗಾಗಿ ದೇವರಿಗೆ ಸಾಂಕೇತಿಕವಾಗಿ ರಕ್ತ ಅರ್ಪಿಸುವ ನಂಬಿಕೆ ಒಳಗೊಂಡಿದೆ. ಈ ವೇಳೆ ಮಕ್ಕಳನ್ನು ಮಧುಮಗನಂತೆ ಶೃಂಗಾರಗೊಳಿಸಲಾಗಿದ್ದು, ಸಂಪ್ರದಾಯದಂತೆ ಸೂಜಿ ಚುಚ್ಚುವಾಗ ‘ಅಯ್ಯಯ್ಯೋ’ ಎಂದು ಕೂಗುತ್ತಾ ಮಕ್ಕಳು ಹರಕೆ ತೀರಿಸಿದರು.
ಇನ್ನು ಹೆಣ್ಣು ಮಕ್ಕಳು ಹಾಗೂ ಗ್ರಾಮಕ್ಕೆ ಹೊಸದಾಗಿ ಬಂದ ಸೊಸೆಯಂದಿರು ಕುಲದೇವಿಗೆ ‘ದೀವಜ್’ ಅಂದರೆ ದೀಪ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದರು. ಹಿಂದಿನ ದಿನದಿಂದ ಉಪವಾಸವಿದ್ದು, ದಾಡ್ ದೇವಸ್ಥಾನದಿಂದ ದೀಪ ಹೊತ್ತುಕೊಂಡು ಮಾರಿಕಾ ದೇವಿ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಬಂದು ಹರಕೆ ಒಪ್ಪಿಸುವುದು ಇಲ್ಲಿನ ಪಾರಂಪರಿಕ ಪದ್ಧತಿ. ಋತುಮತಿಯಾಗುವ ಮುನ್ನವೇ ಈ ಸೇವೆ ಸಲ್ಲಿಸಬೇಕೆಂಬ ನಿಯಮವಿದ್ದು, ತಪ್ಪಿದಲ್ಲಿ ಪ್ರಾಯಶ್ಚಿತವಾಗಿ ತಾಯಿ ಅಥವಾ ಸಂಬಂಧಿತ ಮಹಿಳೆ ಒಂಬತ್ತು ಬತ್ತಿಯ ದೀವಜ್ ಸಲ್ಲಿಸುವ ಸಂಪ್ರದಾಯವೂ ಇದೆ.ಕಾಶಿಪುರುಷ ಕುಟುಂಬದವರು ಜಾತ್ರೆಯ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಾಜಾಳಿ ಭಾಗದ ಗ್ರಾಮಸ್ಥರು ಮಾತ್ರವಲ್ಲದೇ ಗೋವಾ, ಬೆಂಗಳೂರು ಸೇರಿ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮದುವೆ, ಸಂತಾನಪ್ರಾಪ್ತಿ ಹಾಗೂ ಅನಾರೋಗ್ಯ ನಿವಾರಣೆಗಾಗಿ ಭಕ್ತರು ಇಲ್ಲಿ ವಿಶೇಷ ಹರಕೆ ಹೊತ್ತುಕೊಳ್ಳುತ್ತಾರೆ.
ಇನ್ನು ಜೈಕಾರಗಳೊಂದಿಗೆ ಬಂಡಿಗಳನ್ನು ಎಳೆಯುವ ಮೂಲಕ ದೇವರಿಗೆ ಪೂಜೆ ಸಲ್ಲಿಸಿ, ಭಕ್ತರು ತಮ್ಮ ಉಪವಾಸವನ್ನು ಅಂತ್ಯಗೊಳಿಸುವುದರೊಂದಿಗೆ ಜಾತ್ರಾ ಮಹೋತ್ಸವ ಸಮಾಪ್ತಿಗೊಂಡಿತು.