ಹುಬ್ಬಳ್ಳಿ:
ಕನ್ನಡ ರಾಜ್ಯೋತ್ಸವದಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿಗಳು ಪಾಲ್ಗೊಳ್ಳಬೇಕು. ಅಚ್ಚುಕಟ್ಟಾದ ಮೆರವಣಿಗೆ ಮಾರ್ಗ ಸಿದ್ಧಪಡಿಸಬೇಕು. ಕನ್ನಡಕ್ಕಾಗಿ ಶ್ರಮಿಸುತ್ತಿರುವ ಪ್ರಾಮಾಣಿಕರಿಗೆ ಧೀಮಂತ ಪ್ರಶಸ್ತಿ ನೀಡಬೇಕು, ಪ್ರತಿ ವಾರ್ಡ್‌ನಲ್ಲಿ ಸದಸ್ಯರಿಂದ ಕನ್ನಡ ಹಬ್ಬ ಆಚರಿಸಬೇಕು. ಈ ಕುರಿತು ಆಯುಕ್ತರು, ಮೇಯರ್ ಸದಸ್ಯರಿಗೆ, ಅಧಿಕಾರಿಗಳಿಗೆ ಸೂಚಿಸಬೇಕು.ಮಹಾನಗರ ಪಾಲಿಕೆಯಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಕನ್ನಡಪರ ಸಂಘಟನೆಗಳ ಸಲಹೆ, ಸೂಚನೆ ಆಲಿಸುವ ಸಭೆಯಲ್ಲಿ ಕೇಳಿಬಂದ ಮಾತುಗಳು.
₹ 1 ಕೋಟಿ ಖರ್ಚುಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಮುಖ್ಯ ವೇದಿಕೆ, ಮೆರವಣಿಗೆ ಸೇರಿದಂತೆ ಅಚ್ಚುಕಟ್ಟಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಈ ಬಾರಿ ₹ 1 ಕೋಟಿ ಖರ್ಚು ಮಾಡಲು ತೀರ್ಮಾನಿಸಲಾಗಿದೆ ಎಂದರು. ಆಗ ಸಮತಾಸೇನಾ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ, ಅದ್ಧೂರಿ ಆಚರಣೆಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ, ಕಳೆದ ಬಾರಿಯ ರಾಜ್ಯೋತ್ಸವ ಹಾಗೂ ಮಹನೀಯರ ಜಯಂತಿಗೆ ಹಾಕಿದ್ದ ಶಾಮಿಯಾನ್ ಬಾಡಿಗೆ ನೀಡಿಲ್ಲ ಎಂದರು. ಕನ್ನಡಾಂಬೆ ಮೆರವಣಿಗೆಗೆ ಅದ್ಧೂರಿ ಚಾಲನೆ ನೀಡಲಾಗುತ್ತದೆ. ಬಳಿಕ ಪಾಲಿಕೆ ಸದಸ್ಯರಾಗಲಿ, ಅಧಿಕಾರಿಗಳು ಮೆರವಣಿಗೆ ಕೊನೆಯ ವರೆಗೂ ಇರುವುದಿಲ್ಲ. ಜತೆಗೆ ನಿಗದಿತ ವೇಳೆಗೆ ಮೆರವಣಿಗೆ ಆರಂಭಿಸುವುದಿಲ್ಲ. ಹೀಗಾದರೆ ಹೇಗೆ ಯಶಸ್ವಿ ಕಾರ್ಯಕ್ರಮ ಮಾಡಲು ಸಾಧ್ಯವೆಂದು ಪ್ರಶ್ನಿಸಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಮೇಲ್ಸೇತುವೆ ಕಾಮಗಾರಿ ನೆಪದಲ್ಲಿ ಚೆನ್ನಮ್ಮ ವೃತ್ತದ ಹಾಳಾಗಿದ್ದು ರಾಜ್ಯೋತ್ಸವ ಪೂರ್ವದಲ್ಲಿಯೇ ಶುಚಿಗೊಳಿಸಬೇಕು. ಆಂಗ್ಲ ಭಾಷೆಯ ನಾಮಫಲಕ ತೆರವುಗೊಳಿಸಬೇಕೆಂದು ಮನವಿ ಮಾಡಿದರು.ಕಳೆದ ವರ್ಷ ರೌಡಿಶೀಟರ್, ನಕಲಿ ಹೋರಾಟಗಾರರಿಗೆ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ರಾಜಕೀಯ ಬೆರಸದೆ, ಅರ್ಹ ಆಹ್ವಾನಿಸದೆ ಅರ್ಹ ಸಾಧಕರನ್ನು ಗುರುತಿಸಿ ಪಾಲಿಕೆಯೇ ಪ್ರಶಸ್ತಿ ವಿತರಿಸಬೇಕು ಎಂದು ಒತ್ತಾಯಿಸಿದರು.
ಮೇಯರ್ ಮಾತನಾಡಿ, ಕಳೆದ ವರ್ಷ ಆಗಿರುವ ನ್ಯೂನತೆ ಸರಿಪಡಿಸಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲಾಗುವುದು. ಕನ್ನಡಪರ ಹೋರಾಟಗಾರರಿಗೆ ಅ.26ರೊಳಗೆ 25000 ಕನ್ನಡ ಧ್ವಜ ಪೂರೈಸಲಾಗುವುದು. ಅನ್ಯ ಭಾಷೆಯ ನಾಮಫಲಕ ತೆರವಿಗೆ ಕ್ರಮಕೈಗೊಳ್ಳುವ ಜತೆಗೆ ಮೆರವಣಿಗೆ ಮಾರ್ಗದಲ್ಲಿ ಸ್ವಚ್ಛತೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಸಭೆಯಲ್ಲಿ ಉಪಮೇಯರ್ ಸಂತೋಷ ಚವ್ಹಾಣ, ಆಯುಕ್ತ ಡಾ. ರುದ್ರೇಶ.ಘಾಳಿ, ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ, ವಿಪಕ್ಷ ನಾಯಕ ಇಮ್ರಾನ ಎಲಿಗಾರ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಸೇರಿದಂತೆ ಸದಸ್ಯರು, ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.