ಕನ್ನಡಪ್ರಭ ವಾರ್ತೆ ಮದ್ದೂರು
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಪ್ರಚಾರ ರಥ ಯಾತ್ರೆಗೆ ಪಟ್ಟಣದಲ್ಲಿ ಶುಕ್ರವಾರ ಅದ್ಧೂರಿ ಸ್ವಾಗತ ನೀಡಲಾಯಿತು.ಡಿ.10 ರಂದು ಮದ್ದೂರಿಗೆ ಆಗಮಿಸಬೇಕಾಗಿದ್ದ ಕನ್ನಡ ರಥ ಮಾಜಿ ಸಿಎಂ ಎಸ್.ಎಂ.ಕೃಷ್ಣರ ನಿಧನದ ಹಿನ್ನೆಲೆಯಲ್ಲಿ ರದ್ದುಗೊಂಡಿತ್ತು. ಅದರ ಬದಲು ಶುಕ್ರವಾರ ತಾಲೂಕಿನ ವಳಗೆರೆಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಕನ್ನಡ ರಥವು ಬೆಳಗ್ಗೆ ಪಟ್ಟಣದ ಪ್ರವಾಸಿ ಮಂದಿರ ವೃತ್ತಕ್ಕೆ ಆಗಮಿಸಿದಾಗ ತಾಲೂಕು ಆಡಳಿತದ ಪರವಾಗಿ ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.
ನಂತರ ಪುರಸಭೆ ಅಧ್ಯಕ್ಷ ಕೋಕಿಲ ಅರುಣ್ ನೇತೃತ್ವದಲ್ಲಿ ಉಪಾಧ್ಯಕ್ಷ ಪ್ರಸನ್ನ ಕುಮಾರ್, ಮುಖ್ಯಾಧಿಕಾರಿ ಮೀನಾಕ್ಷಿ, ಪುರಸಭಾ ಸದಸ್ಯರು ಹಾಗೂ ಸಿಬ್ಬಂದಿ ರಥಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಈ ವೇಳೆ ನೆರೆದಿದ್ದ ಜನಸ್ತೋಮ ಕನ್ನಡ ಉಳಿಸಿ ಕನ್ನಡ ಬೆಳೆಸಿ, ಕನ್ನಡ ಪ್ರೇಮ ಮೆರೆಯಿರಿ ಎಂಬ ಘೋಷಣೆಯೊಂದಿಗೆ ಕನ್ನಡ ರಥಕ್ಕೆ ಹೂ ಮಳೆಗೈದು ಹರ್ಷ ವ್ಯಕ್ತಪಡಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡಪರ ಸಂಘಟನೆಯ ಮುಖಂಡರು, ದಲಿತ ಸಂಘಟನೆಗಳ ಕಾರ್ಯಕರ್ತರು ರಥಕ್ಕೆ ಮಾಲಾರ್ಪಣೆ ಮಾಡಿದರು. ಬಳಿಕ ಪ್ರವಾಸಿ ವೃತ್ತದಿಂದ ಆರಂಭಗೊಂಡ ಕನ್ನಡ ರಥದ ಮೆರವಣಿಗೆ ವಿವಿಧ ಶಾಲೆಗಳ ಸುಮಾರು 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮೆರಗು ನೀಡಿದರು.
ಪ್ರವಾಸಿ ಮಂದಿರ ವೃತ್ತದಿಂದ ಪೇಟೆ ಬೀದಿ, ಕೊಲ್ಲಿ ಸರ್ಕಲ್ ಮಾರ್ಗವಾಗಿ ಸಾಗಿದ ರಥಕ್ಕೆ ರಸ್ತೆ ಇಕ್ಕೇಲಗಳಲ್ಲಿ ನೆರೆದಿದ್ದ ಕನ್ನಡ ಅಭಿಮಾನಿಗಳು ಪುಷ್ಪಾರ್ಚನೆ ಮಾಡಿ ಘೋಷಣೆ ಕೂಗಿದರು. ತರುವಾಯ ಕೊಲ್ಲಿ ಸರ್ಕಲ್ ನಿಂದ ಕೊಪ್ಪ ಹೊಸ ಸರ್ಕಲ್ ಮಾರ್ಗವಾಗಿ ಚಾಮನಹಳ್ಳಿಗೆ ಕನ್ನಡ ರಥವನ್ನು ಬೀಳ್ಕೊಡಲಾಯಿತು.ಈ ವೇಳೆ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ವಿ.ಹರ್ಷ, ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್.ಸುನಿಲ್ ಕುಮಾರ್, ಮಾಜಿ ಅಧ್ಯಕ್ಷೆ ಅಪೂರ್ವ ಚಂದ್ರ, ಉಪಾಧ್ಯಕ್ಷೆ ರಾಧಾ ಕೆ.ಪಿ.ಶ್ರೀಧರ್, ಈರಯ್ಯ, ಸಂಘಟನಾ ಕಾರ್ಯದರ್ಶಿ ಸೊಳ್ಳೆಪುರ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಳಿರಯ್ಯ, ಕಸಾಪ ಮಹಿಳಾ ಘಟಕದ ಸುನಂದಾ ಜಯರಾಮ್, ಸೌಭಾಗ್ಯ ಮಹದೇವ್, ಸದಸ್ಯೆ ಶ್ರೀಲತಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ.ಸಿ.ಉಮಾಶಂಕರ್. ದಲಿತ ಸಂಘಟನೆಯ ನಿಂಗಪ್ಪ ಹಲವರು ಪಾಲ್ಗೊಂಡಿದ್ದರು.
100 ಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆ:ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಪಟ್ಟಣದ ಚನ್ನೇಗೌಡ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸುಮಾರು 100 ಮೀಟರ್ ಉದ್ದದ ಕನ್ನಡ ಬಾವುಟವನ್ನು ಹಿಡಿದು ಕನ್ನಡ ರಥದ ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಿದ್ದು ಸಾರ್ವಜನಿಕರ ವಿಶೇಷ ಗಮನ ಸೆಳೆಯಿತು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಜಾನಪದ ಕಲಾತಂಡಗಳ ಆಕರ್ಷಕ ನೃತ್ಯ ಪ್ರದರ್ಶನ ಹಾಗೂ ಕನ್ನಡ ಗೀತೆಗಳನ್ನು ಹಾಡಿದ್ದು ಜನಪ್ರತಿನಿಧಿಗಳ ಹಾಗೂ ಕನ್ನಡ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು.