ದೈವ ಸ್ವರೂಪಿ ರೈತರ ಹತ್ತಿಕ್ಕುತ್ತಿರುವುದು ವಿಷಾದನೀಯ: ಬಿ.ಎಚ್. ಬನ್ನಿಕೋಡ

KannadaprabhaNewsNetwork |  
Published : Dec 14, 2024, 12:48 AM IST
೧೩ಎಚ್‌ವಿಆರ್೩ | Kannada Prabha

ಸಾರಾಂಶ

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಹಾವೇರಿ: ದೇಶಕ್ಕೆ ಅನ್ನ ನೀಡುವ ರೈತರು ದೇವರ ಸಮಾನರು. ಆದರೆ, ಇಂದಿನ ದಿನಗಳಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ದೈವ ಸ್ವರೂಪರಾಗಿರುವ ರೈತರನ್ನು ತುಳಿಯುತ್ತಿರುವುದು ವಿಷಾದನೀಯ ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.

ಬೆಳೆವಿಮೆ ಪರಿಹಾರ, ಬೇಡ್ತಿ-ವರದಾ ನದಿ ಜೋಡಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ೮ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ರೈತರ ಸಮಸ್ಯೆಗಳು ಸಾವಿರಾರು ಇದ್ದು, ಆಳುವವರು ರೈತರನ್ನು ಕಡೆಗಣಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯ ರೈತರು ಸತತವಾಗಿ ೭ ದಿನದಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಇದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಸರ್ಕಾರ, ಜಿಲ್ಲಾಡಳಿತ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ರೈತರನ್ನು ಕಡೇಗಣಿಸುತ್ತ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಲಕ್ಷಾಂತರ ರೈತರು ತಮ್ಮ ಹಕ್ಕಿಗಾಗಿ ದೆಹಲಿ ಮಾದರಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಅನಿವಾರ್ಯ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ, ಬೆಳೆವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ನಬಾರ್ಡ್ ಸಾಲ ಮುಂದುವರಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ ೭ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ತಮ್ಮ ಬೇಡಿಕೆ ಈಡೇರಿಸುವ ತನಕ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಾಲತೇಶ ಪೂಜಾರ, ಮುತ್ತಪ್ಪ ಗುಡಗೇರಿ, ಚನ್ನಪ್ಪ ಮರಡೂರ, ಮಾಲತೇಶ ಬಾರ್ಕೆರ, ನಿಂಗನಗೌಡ ರಾಯನಗೌಡ್ರ, ಖಾದರಲಿಂಗ ಜೂಗತಿ, ನಾಗಪ್ಪ ಕೊಟ್ಟಣದ, ಎಸ್.ಎಸ್. ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಕೆ.ದೊಡ್ಡಗೌಡ್ರ, ಕಿರಣ ಗಡಿಗೋಳ, ಮಹಾದೇವಕ್ಕ ಲಿಂಗದಹಳ್ಳಿ, ದ್ಯಾಮವ್ವ ಗುಂಡೇನಹಳ್ಳಿ, ಬಸಮ್ಮ ಹಿರೇಮಠ, ಕೊಟ್ರಮ್ಮ ಹಿರೇಮಠ, ಬಸಮ್ಮ ಬನ್ನಿಹಟ್ಟಿ, ಕುಸುಮಕ್ಕ ಗುಂಡೇನಹಳ್ಳಿ, ಜಯಮ್ಮ ಗುಂಡೇನಹಳ್ಳಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು. ಯೋಜನೆ ಗಂಭೀರವಾಗಿ ಪರಿಗಣಿಸಿ

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಇದರಿಂದ ಹಾವೇರಿ ಜಿಲ್ಲೆಯಲ್ಲಿ ವರ್ಷವಿಡೀ ನೀರಾವರಿ ಮಾಡಬಹುದಾಗಿದೆ. ವ್ಯರ್ಥವಾಗಿ ಹರಿಯುವ ನೀರನ್ನು ಇಲ್ಲಿಗೆ ತಂದರೆ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲೆಯ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ತಾರತಮ್ಯ ಆಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೆಳೆವಿಮೆ ಹಣ ಹಾಕದೇ ಬೆಳೆವಿಮೆ ಕಂಪನಿಯವರು ರೈತರಿಗೆ ಅನ್ಯಾಯ ಮಾಡಿದ್ದು, ಕೂಡಲೇ ಜಿಲ್ಲಾಡಳಿತ ಬೆಳೆ ವಿಮೆ ತುಂಬಿಸಿಕೊಂಡ ಕಂಪನಿಯವರನ್ನು ಕರೆಸಿ ಲೆಕ್ಕಾಚಾರ ಮಾಡಿಸಿ, ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ರೈತ ಸಂಘಟನೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ