ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾಡಳಿತ, ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಧಾದಿಕಾರಿಗಳು ಜಿಲ್ಲೆಯ ಜನಪ್ರತಿನಿಧಿಗಳು ಭುವನೇಶ್ವರಿ ತಾಯಿಗೆ ಪುಷ್ಪ ನಮನ ಸಲ್ಲಿಸಿ ಕನ್ನಡದ ರಥವನ್ನು ಸಂಭ್ರಮದಿಂದ ಸ್ವಾಗತಿಸಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕುವೆಂಪು ರಂಗಮಂದಿರದವರೆಗೆ ಹೊರಟ ರಾಜ ಬೀದಿ ಉತ್ಸವದಲ್ಲಿ ವಿವಿಧ ಶಾಲೆಗಳ ಮಕ್ಕಳು ಹೆಜ್ಜೆ ಹಾಕಿದರು. ದುರ್ಗಿಗುಡಿ ಪ್ರೌಢಶಾಲೆಯ ಮಕ್ಕಳು ಸ್ವತಃ ಡೊಳ್ಳು ಬಾರಿಸುತ ಮೆರವಣಿಗೆಗೆ ವಿಶೇಷ ಮೆರಗು ನೀಡಿದರು. ಮೆರವಣಿಗೆ ಉದ್ದಕ್ಕೂ ಕನ್ನಡಪರ ಜಯ ಘೋಷ, ನಾದ ಸ್ವರದೊಂದಿಗೆ ನೆರೆದಿದ್ದ ಕನ್ನಡದ ಮನಸ್ಸುಗಳು ಹೆಜ್ಜೆ ಹಾಕಿದರು.ಕುವೆಂಪು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಗಿರೀಶ್ ಅವರು, ಕನ್ನಡ ಭಾಷೆ ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ಹೃದಯಸ್ಪರ್ಶಿ ಭಾಷೆಯಾಗಿದೆ ಎಂದರು.
|ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಸಾಹಿತ್ಯ ಸಮ್ಮೇಳನ ಕನ್ನಡಿಗರ ಅಸ್ಮಿತೆಯಾಗಿದ್ದು, ಕನ್ನಡದ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮತ್ತು ನಿರ್ಣಯಗಳು ನಡೆಯಲಿದೆ. ಮಾತೃಭಾಷೆಯಲ್ಲಿ ಪ್ರಬುದ್ಧತೆ ಪಡೆದಾಗ ಯಾವುದೇ ಭಾಷೆಯನ್ನು ಸುಲಲಿತವಾಗಿ ಕಲಿಯಬಹುದಾದ ಶಕ್ತಿ ನಮ್ಮ ಮಕ್ಕಳಿಗೆ ಸಿಗುತ್ತದೆ. ಅದಕ್ಕಾಗಿಯೆ ಪ್ರೌಢಶಾಲಾ ಹಂತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ಹಾಗೂ ಸೃಜನಶೀಲ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತಾವು ತೆರೆದುಕೊಳ್ಳಲು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ಕಳೆದ ಎರಡು ದಿನಗಳಿಂದ ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಸಂಚರಿಸಿದ್ದ ರಥವು ಸೋಮವಾರ ಸಂಜೆಯ ವೇಳೆಗೆ ಮಲವಗೊಪ್ಪ, ಭದ್ರಾವತಿ ಸಂಚರಿಸಿ, ಮಂಗಳವಾರ ಬೆಳಗ್ಗೆ ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಲಿದೆ.