(ಲೀಡ್‌) ರೈಲ್ವೆ ಕಾಮಗಾರಿಗೆ ಕೇಂದ್ರದಿಂದ ₹1,900 ಕೋಟಿ ಅನುದಾನ

KannadaprabhaNewsNetwork |  
Published : Oct 29, 2024, 12:51 AM IST
ಪೊಟೋ: 28ಎಸ್‌ಎಂಜಿಕೆಪಿ04ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೀರೂರು ಮತ್ತು ಶಿವಮೊಗ್ಗ ರೈಲ್ವೆ ಮಾರ್ಗದ ಡಬ್ಲಿಂಗ್ ಕಾಮಗಾರಿಗೆ ಶೀಘ್ರದಲ್ಲಿ ₹1,900 ಕೋಟಿ ಅನುದಾನ ಬಿಡುಗಡೆಯಾಗಲಿದ್ದು, ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಆರಂಭದ ನಂತರ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಪರ್ಕ ಸಾಧ್ಯವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಬ್ಲಿಂಗ್ ಕೆಲಸ, ಶಿವಮೊಗ್ಗ ಮತ್ತು ರಾಣೆಬೆನ್ನೂರು ರೈಲು ಮಾರ್ಗ ಪೂರ್ಣವಾದರೆ ರೈಲ್ವೆ ನಕ್ಷೆಯಲ್ಲಿ ಶಿವಮೊಗ್ಗ ಹೆಚ್ಚು ಪ್ರಗತಿ ಸಾಧಿಸಲಿದೆ ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರಂತರವಾಗಿ ಗಮನ ವಹಿಸಿದ ಪರಿಣಾಮ ಮಹತ್ತರ ಯೋಜನೆಗಳನ್ನು ಶಿವಮೊಗ್ಗಕ್ಕೆ ತರಲು ಸಾಧ್ಯವಾಯಿತು. ಎಲ್ಲ ಹಂತಗಳಲ್ಲಿ ಗಮನಿಸಿದರೆ ಕಾಮಗಾರಿಗಳು ಶೀಘ್ರವಾಗಿ ಅನುಷ್ಠಾನವಾಗುತ್ತದೆ. ಶಿವಮೊಗ್ಗದಲ್ಲಿ ಸೆಮಿ ಕಂಡಕ್ಟರ್ ಉತ್ಪಾದನಾ ಘಟಕ ಮತ್ತು ಸಾಫ್ಟ್‌ವೇರ್‌ ಉದ್ಯಮಗಳ ಸ್ಥಾಪನೆಗೆ ಸಂಬಂಧಿಸಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹೆಚ್ಚು ಆಸಕ್ತಿ ವಹಿಸುತ್ತಿದೆ. ಅದಕ್ಕೆ ಪೂರಕವಾಗಿ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಹೊಸನಗರ ಮತ್ತು ಕೊಲ್ಲೂರು ರಸ್ತೆ, ತ್ಯಾವರೆಕೊಪ್ಪ ಮತ್ತು ತಾಳಗುಪ್ಪ ಚತುಷ್ಪಥ ರಸ್ತೆಯು ಮುಂದಿನ ದಿನಗಳಲ್ಲಿ ಗಮನ ಸೆಳೆಯಲಿವೆ. ಸಿಗಂದೂರು ಸೇತುವೆಯೂ ಐದಾರು ತಿಂಗಳಲ್ಲಿ ಲೋಕಾರ್ಪಣೆ ಆಗಲಿದೆ. ಸಂಘವು ಆಯೋಜಿಸಲು ಉದ್ದೇಶಿಸಿರುವ ಶಿವಮೊಗ್ಗ ಹಬ್ಬ ಪರಿಕಲ್ಪನೆ ಉತ್ತಮವಾಗಿದ್ದು, ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಕೊಡುಗೆ ಅಪಾರ. ರಸ್ತೆ, ರೈಲು, ವಿಮಾನ ಸಂಪರ್ಕ ಕ್ಷೇತ್ರಗಳಲ್ಲಿ ಪ್ರಮುಖ ಯೋಜನೆಗಳು ಅನುಷ್ಠಾನಗೊಂಡಿವೆ. ಜಿಲ್ಲೆಯ ಜನರ ಕನಸು ನನಸಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಕೋಟ್ಯಂತರ ರು. ಅನುದಾನ ತಂದಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ಉದ್ಯಮಿಗಳಿಗೆ ಉತ್ತಮ ವೇದಿಕೆ ಒದಗಿಸುವ ಆಶಯದಿಂದ ಡಿಸೆಂಬರ್‌ನಲ್ಲಿ ಶಿವಮೊಗ್ಗ ಎಕ್ಸ್‌ಪೋ ಆಯೋಜಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ವಾಣಿಜ್ಯ ಕೈಗಾರಿಕಾ, ಪ್ರವಾಸೋದ್ಯಮ ಪ್ರೋತ್ಸಾಹಿಸಲು 2025ರ ಏಪ್ರಿಲ್‌ನಲ್ಲಿ ಶಿವಮೊಗ್ಗ ಹಬ್ಬ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೆಚ್ಚಿನ ಕೊಡುಗೆ ನೀಡಿದ್ದಾರೆ. ನಿರಂತರವಾಗಿ ಯೋಜನೆಗಳ ಬಗ್ಗೆ ಆಲೋಚಿಸಿ ಅನುಷ್ಠಾನ ಮಾಡಲು ಪರಿಶ್ರಮ ವಹಿಸಿದ್ದಾರೆ. ಪರಿಣಾಮ ಶಿವಮೊಗ್ಗ ಸಮಗ್ರ ಅಭಿವೃದ್ಧಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ಜಂಟಿ ಕಾರ್ಯದರ್ಶಿ ಸುಕುಮಾರ್, ಪ್ರಮುಖರಾದ ಎಸ್.ಎಸ್.ಉದಯಕುಮಾರ್‌, ಪಿ.ರುದ್ರೇಶ್, ವಸಂತ ಹೋಬಳಿದಾರ್, ಪ್ರದೀಪ್ ಎಲಿ, ಗಣೇಶ ಅಂಗಡಿ, ವಿ.ಕೆ.ಜೈನ್, ಕಿರಣ್ ಕುಮಾರ್, ಶಿವಕುಮಾರ್, ಎಸ್.ಪಿ.ಶಂಕರ್ , ಸಿ.ಎ.ಶರತ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ