ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆಗೆ ಅದ್ಧೂರಿ ಸ್ವಾಗತ

KannadaprabhaNewsNetwork | Published : Nov 11, 2024 12:55 AM

ಸಾರಾಂಶ

ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯನ್ನು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಬರಮಾಡಿಕೊಂಡರು. ಪೂರ್ಣ ಕುಂಭ ಸ್ವಾಗತದೊಂದಿಗೆ ತಾಯಿ ಭುವನೇಶ್ವರಿ ಹೊತ್ತ ರಥವನ್ನು ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ಭಾನುವಾರ ಬರಮಾಡಿಕೊಂಡರು.

ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ನೆರವೇರಿಸಿ ರಥವನ್ನು ಸ್ವಾಗತಿಸಿದರು. ಹಾಸನ ಜಿಲ್ಲೆಯ ಕಲಾತಂಡಗಳು ರಣಕಹಳೆ ಊದುವ ಮೂಲಕ ಹಾಗೂ ಚೆಟ್ಟಿಮೇಳ ವಾದ್ಯ ನುಡಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಗುಂಪಿನವರು ಪೂರ್ಣಕುಂಭ ಸ್ವಾಗತದೊಂದಿಗೆ ತಾಯಿ ಭುವನೇಶ್ವರಿ ಹೊತ್ತ ರಥವನ್ನು ಸ್ವಾಗತಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಹಸೀಲ್ದಾರರ ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕಂದಾಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲರೂ ತಾಯಿ ಭುವನೇಶ್ವರಿ ರಥವನ್ನು ಬರ ಮಾಡಿಕೊಂಡರು.

ಬಳಿಕ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಎಲ್ಲರೂ ಸೇರಿದರು.

ಲಹರಿ ಶಿಕ್ಷಕಿಯರ ತಂಡದವರು ನಾಡಗೀತೆ ಮತ್ತು ರೈತ ಗೀತೆ ಹಾಡಿದರು. ನಂತರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್, ನೆರೆದಿದ್ದ ಎಲ್ಲರನ್ನು ಸ್ವಾಗತಿಸಿದರು.

ಡಿ.20ರಿಂದ ಮೂರು ದಿನ ಮಂಡ್ಯ ನಗರದಲ್ಲಿ ನಡೆಯಲಿರುವ ಅಖಿಲ ಭಾರತ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಕನ್ನಡ ಜ್ಯೋತಿ ರಥವನ್ನು ಕೊಡಗು ಜಿಲ್ಲೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಆ ನಿಟ್ಟಿನಲ್ಲಿ ಮಡಿಕೇರಿ ಮೂಲಕ ವಿರಾಜಪೇಟೆ-ಗೋಣಿಕೊಪ್ಪ-ಪೊನ್ನಂಪೇಟೆಗೆ ತೆರಳಲಿದೆ ಎಂದು ಮಾಹಿತಿ ನೀಡಿದರು.

ನ.11ರಂದು ಪೊನ್ನಂಪೇಟೆಯಿಂದ ಕುಶಾಲನಗರಕ್ಕೆ ತೆರಳಿ, ಕುಶಾಲನಗರದಲ್ಲಿ 5 ಸಹಸ್ರ ಜನರಿಂದ ಕನ್ನಡ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಬಳಿಕ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕನ್ನಡ ಭಾಷೆ, ನಾಡು-ನುಡಿ, ಸಂಸ್ಕೃತಿ ಕಲೆಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಅಭಿಮಾನ ಇರಬೇಕು. ಆ ನಿಟ್ಟಿನಲ್ಲಿ ಕನ್ನಡ ಭಾಷೆ ನಾಡು, ನುಡಿ, ಸಂಸ್ಕೃತಿ ಸಂದೇಶ ಸಾರುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಕ್ರೆಸೆಂಟ್ ಶಾಲೆ ವಿದ್ಯಾರ್ಥಿಗಳು ಹಾಗೂ ನಗರದ ಬಾಲಕರ ಬಾಲಮಂದಿರದ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನೀರ್ ಅಹ್ಮದ್, ರೇವತಿ ರಮೇಶ್, ತಾಲೂಕು ಘಟಕದ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ತಹಸೀಲ್ದಾರ್ ಪ್ರವೀಣ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಪೌರಾಯುಕ್ತ ರಮೇಶ್, ತಾ.ಪಂ. ಇಒ ಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಪ್ರಕಾಶ್ ಆಚಾರ್ಯ, ಕೆ.ಟಿ.ಬೇಬಿ ಮ್ಯಾಥ್ಯೂ, ಬಿ.ಆರ್.ಜೋಯಪ್ಪ, ಅಂಬೆಕಲ್ಲು ಕುಶಾಲಪ್ಪ, ಅಂಬೆಕಲ್ಲು ನವೀನ್, ಎಚ್.ಎಸ್.ಪ್ರೇಮ್ ಕುಮಾರ್, ಸಿದ್ದರಾಜು ಬೆಳ್ಳಯ್ಯ, ಬಿಸಿಎಂ ಇಲಾಖೆ ಅಧಿಕಾರಿ ಪಿ.ಪಿ.ಕವಿತಾ, ವೃತ್ತ ನಿರೀಕ್ಷಕರಾದ ರಾಜು, ಪೊಲೀಸ್ ಇನ್‌ಸ್ಪೆಕ್ಟರ್‌ ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಮಣಜೂರು ಮಂಜುನಾಥ್, ಸೀತಾಲಕ್ಷ್ಮೀ, ಸವಿತಾ ಕೀರ್ತನ್, ಮೋಹನ್ ಕುಮಾರ್ ಇತರರು ಇದ್ದರು.

ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆಯ ವಿಶೇಷತೆ: ಕನ್ನಡ ಜ್ಯೋತಿ ರಥ ಯಾತ್ರೆಯ ವಾಹನದ ಮುಂಭಾಗದಲ್ಲಿ ಪ್ರಮುಖವಾಗಿ ತಾಯಿ ಭುವನೇಶ್ವರಿ ಮಾತೆ ಪ್ರತಿಮೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಒಳಗೊಂಡಿದ್ದು ಎದ್ದುಕಂಡಿತ್ತು.

ತಾಯಿ ಭುವನೇಶ್ವರಿ ಬಳಿ ತಾಯಿ ಮಾತೆ ಕಾವೇರಿ ಪ್ರತಿಮೆ ಒಳಗೊಂಡ ಕೃಷ್ಣರಾಜ ಸಾಗರ ಅಣೆಕಟ್ಟು ಬರೆದಿದ್ದು ವಿಶೇಷವಾಗಿತ್ತು.

ಜ್ಯೋತಿ ಹೊತ್ತ ರಥದ ಎಡ ಮತ್ತು ಬಲ ಬದಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ ಅವರ ಒಳಗೊಂಡ ಭಾವಚಿತ್ರ ಒಳಗೊಂಡಿದ್ದು ವಿಶೇಷವಾಗಿತ್ತು.

ಹಾಗೆಯೇ ಜ್ಯೋತಿ ಹೊತ್ತ ರಥದ ಹಿಂಭಾಗದಲ್ಲಿ ಎತ್ತುಗಳ ಜೊತೆ ರೈತ ಉಳುಮೆ ಮಾಡುವ ದೃಶ್ಯ ಮನಮೋಹಕವಾಗಿತ್ತು. ಜೊತೆಗೆ ಕರ್ನಾಟಕ ರಾಜ್ಯದ ಲಾಂಛನ, ಮಧ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಲೋಗೋ ಒಳಗೊಂಡಿದ್ದು ಗಮನ ಸೆಳೆಯಿತು.

Share this article