ಕನ್ನಡ ಪ್ರಭ ವಾರ್ತೆ ಮೊಳಕಾಲ್ಮೂರು
ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮಕ್ಕೆ ಗುರುವಾರ ಸಂಜೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಶಾಸಕ ಎನ್.ವೈ.ಗೋಪಾಲಕೃಷ್ಣ ಅದ್ಧೂರಿಯಾಗಿ ಬರಮಾಡಿಕೊಂಡು ಮೆರವಣಿಗೆಗೆ ಚಾಲನೆ ನೀಡಿದರು.ಭಾರತ ಸಂವಿಧಾನ ಅಂಗೀಕೃತಗೊಂಡ 75 ವರ್ಷಗಳ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ರಥಕ್ಕೆ ಗ್ರಾಮದ ಎಲ್ಲಾ ವರ್ಗದ ಜನರು ಅದ್ಧೂರಿಯಾಗಿ ಸ್ವಾಗತಿಸಿಕೊಂಡು ಸಮಾಜ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ, ವಿವಿಧ ಪ್ರಗತಿಪರ ಸಂಘಟನೆ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅಂಬೇಡ್ಕರ್ ಪ್ರತಿಮೆ, ಬುದ್ಧ, ಬಸವ, ಒನಕೆ ಓಬವ್ವ, ಸಂವಿಧಾನ ಪೀಠಿಕೆ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪ್ರಚಾರದ ಸ್ತಬ್ಧ ಚಿತ್ರಗಳನ್ನು ಹೊತ್ತ ರಥವನ್ನು ವಿವಿಧ ಜನಪದ ಕಲಾ ತಂಡಗಳ ನೆರವಿನೊಂದಿಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಸಂಭ್ರಮದಿಂದ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವವನ್ನು ಸಾರಿದರು.ಮೆರವಣಿಗೆಯುದ್ದಕ್ಕೂ ಕುಂಬ ಹೊತ್ತ ಮಹಿಳೆಯರು ಕಾರ್ಯಕ್ರಮಕ್ಕೆ ಮೆರುಗು ತಂದರೆ ವಿವಿಧ ವೇಷಧಾರಿಯ ಮಕ್ಕಳು ನೋಡುಗರ ಗಮನ ಸೆಳೆದರು. ರಥ ಆಗಮನದ ಹಿನ್ನೆಲೆಯಲ್ಲಿ ಗ್ರಾಮದ ತುಂಬೆಲ್ಲಾ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಗ್ರಾಮದ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಜಾತದ ಜಿಲ್ಲಾ ನೋಡೆಲ್ ಅಧಿಕಾರಿ ಪರಮೇಶ್ವರಪ್ಪ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ ವೇದಿಕೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎನ್.ವೈ.ಗೋಪಾಲಕೃಷ್ಣ ಹಿಂದೂ ,ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮಿಯರಿಗೂ ಒಂದೊಂದು ಪವಿತ್ರಗ್ರಂಥ ಇದ್ದರೂ ಈ ಎಲ್ಲಾ ಧರ್ಮ ಗ್ರಂಥಗಳ ಸಾರವನ್ನು ಹೊಂದಿರು ವಂತ ಸಂವಿಧಾನವೇ ಎಲ್ಲಾ ವರ್ಗಕ್ಕೂ ಪವಿತ್ರ ಗ್ರಂಥವಾಗಿದೆ. ಸಮಾನತೆ, ಭಾತೃತ್ವ, ದೇಶದ ಐಕ್ಯತೆಯನ್ನು ಸಾರುವ ಸಂವಿಧಾನವನ್ನು ಪ್ರತಿಯೊಬ್ಬರೂ ಅರಿಯುವ ಜತೆಗೆ ಗೌರವಿಸಬೇಕು. ಜತೆಗೆ ಮಕ್ಕಳಿಗೆ ಬಾಲ್ಯದಿಂದಲೇ ಸಂವಿಧಾನವನ್ನು ತಿಳಿಸಬೇಕು ಎಂದು ತಿಳಿಸಿದರು.ಈ ವೇಳೆ ಬಹುಜನ ಚಳವಳಿಯ ಮರ್ಲಹಳ್ಳಿ ಪರಮೇಶ್ ವಿಶೇಷ ಉಪನ್ಯಾಸ ನೀಡಿದರು. ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪರಮೇ ಶ್ವರಪ್ಪ, ತಹಸೀಲ್ದಾರ್ ಜಗದೀಶ, ತಾಪಂ ಇ.ಒ.ಪ್ರಕಾಶ, ಗ್ರಾಪಂ ಅಧ್ಯಕ್ಷ ವಿರುಪಾಕ್ಷಪ್ಪ, ಸಮಾಜಕ ಕಲ್ಯಾಣ ಇಲಾಖೆಯ ಉಪ ನಿರ್ಧೇಶಕ ಜಗದೀಶ ಹೆಬ್ಬಳ್ಳಿ, ಸಮಾಜ ಕಲ್ಯಾಣಾಧಿಕಾರಿ ಮಾಲತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ, ಸಿಡಿಪಿಒ ನವೀನ್, ಮುಖಂಡರಾದ ಭಕ್ತ ಪ್ರಹ್ಲಾದ್, ದಸಂಸ ಮುಖಂಡರಾದ ಕೊಂಡಾಪುರ ಪರಮೇಶ, ಬಿ.ಟಿ.ನಾಗಭೂಷಣ, ಓ.ಕರಿಬಸಪ್ಪ, ಜಿ.ಶ್ರೀನಿವಾಸ ಮೂರ್ತಿ, ತುಮಕೂರ್ಲಹಳ್ಳಿ ತಿಪ್ಪೇಶ, ನೇರ್ಲಹಳ್ಳಿ ಚಂದ್ರಶೇಖರ, ಪಿಡಿಒ ಹೊನ್ನೂರಪ್ಪ, ಟಿ.ಜಿ.ಬಸಣ್ಣ ಇದ್ದರು.