ರೋಣ: ನಮ್ಮ ಹೆಮ್ಮೆಯ ಕರುನಾಡು ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಜನಪದ ಮುಂತಾದ ವೈವಿಧ್ಯತೆಯಿಂದ ಕೂಡಿದ ಸುಂದರ ಬೀಡಾಗಿದ್ದು, ಈ ಕುರಿತು ಯುವ ಪೀಳಿಗೆ ತಿಳಿದುಕೊಳ್ಳಬೇಕು ಎಂದು ಹಿರಿಯ ಸಾಹಿತಿ ವಿ.ಕೆ. ಪಾಟೀಲ ಹೇಳಿದರು.ಅವರು ತಾಲೂಕಿನ ಹುಲ್ಲೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರೋಣ ತಾಲೂಕು ಘಟಕ ವತಿಯಿಂದ ಕರ್ನಾಟಕ ಏಕೀಕರಣ ಸಂಭ್ರಮ-50 ಅಂಗವಾಗಿ ಜರುಗಿದ ಸರಣಿ ಉಪನ್ಯಾಸ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮಪೂರ್ವಜರು ನಮಗೆ ಸುಂದರವಾಗಿ ಕಟ್ಟಿಕೊಟ್ಟ ಕರುನಾಡ ರಕ್ಷಣೆ ನಮ್ಮೆಲ್ಲ ಗುರುತರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಉಳಿವಿಗೆ ಶ್ರಮಿಸಬೇಕು. ವಿವಿಧ ಪ್ರಾಂತಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಿ, ಅಖಂಡ ಕರ್ನಾಟಕ ಏಕೀಕರಣ ಹೋರಾಟ ಕುರಿತು ಪ್ರತಿಯೊಬ್ಬರು ತಿಳಿಯಬೇಕು. ಜೊತೆಗೆ ಹೋರಾಟದಲ್ಲಿ ದುಡಿದ ಮಹನೀಯರನ್ನು ಸ್ಮರಿಸುವುದು ಅತೀ ಮುಖ್ಯವಾಗಿದೆ. ಕನ್ನಡ ಭಾಷೆ, ನಾಡು, ನೆಲ,ಜಲ ವಿಷಯದಲ್ಲಿ ಕನ್ನಡಿಗರೂ ಒಗ್ಗೂಡಬೇಕು ಎಂದು ಕರೆ ನೀಡಿದರು. ಪಿ. ಆರ್. ಹಿರೇಮಠ ಅವರು, ಕರ್ನಾಟಕ ಏಕೀಕರಣ ಚಳುವಳಿಯ ವಿವಿಧ ಮಜಲುಗಳನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ರೋಣ ತಾಲೂಕಿನ ಜಕ್ಕಲಿ ಗ್ರಾಮ ಅಂದಾನಪ್ಪ ದೊಡ್ಡಮೇಟಿ ಅವರ ಹೋರಾಟ ಮನೋಭಾವ, ಸಂಘಟನಾತ್ಮಕ ಶಕ್ತಿಯನ್ನು ಅರಿತು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರೇ ಸ್ವತಃ ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿದ್ದನ್ನು ನಾವಿಂದು ನೆನಪಿಸಿಕೊಳ್ಳಬೇಕು. ಇದರಿಂದಲೇ ಅಂದಾನಪ್ಪ ದೊಡ್ಡಮೇಟಿ ಅವರ ಹೋರಾಟದ ವ್ಯಕ್ತಿತ್ವ ರಾಜ್ಯ, ರಾಷ್ಟ್ರ ಪ್ರೇಮ ಎಂತದ್ದು ಎಂಬುದು ತಿಳಿಯುತ್ತದೆ ಎಂದರು. ಮುಖ್ಯೋಪಾಧ್ಯಾಯ ಅಶೋಕ ಲಮಾಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಮಾಡಿದರು.ಪ್ರಾಸ್ತಾವಿಕವಾಗಿ ಕಸಾಪ ತಾಲೂಕು ಅಧ್ಯಕ್ಷ ರಮಾಕಾಂತ ಕಮತಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿ.ಬಿ. ಪಾಟೀಲ, ಬಿ.ಎಸ್. ಮಾನೆ, ಆರ್. ಕೆ. ಭಜಂತ್ರಿ ಉಪಸ್ಥಿತರಿದ್ದರು.