ನೂತನ ಸಂಸದ ಎಚ್.ಡಿ.ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ

KannadaprabhaNewsNetwork | Published : Jun 7, 2024 12:30 AM

ಸಾರಾಂಶ

ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದ್ದಾರೆ. ಅವರ ಆಡಳಿತ ಅವಧಿಯಲ್ಲಿ ರೈತ ಪರವಾದ ಯೋಜನೆ ಜಾರಿಗೆ ತಂದು ಆಡಳಿತ ನಡೆಸಿದ್ದಾರೆ. ಇದರ ಕೃತಜ್ಞತೆಗಾಗಿ ಲೋಕಸಭಾ ಚುನಾವಣೆಯಲ್ಲಿ ರೈತ ಸಮುದಾಯ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ ಕೈ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ನೂತನ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪಟ್ಟಣದಲ್ಲಿ ಮಂಗಳವಾರ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿ ಅಭಿನಂದಿಸಿದರು.

ಮಂಡ್ಯ ಮತ ಎಣಿಕೆ ಕೇಂದ್ರಕ್ಕೆ ತೆರಳಲು ಬೆಂಗಳೂರಿನಿಂದ ಆಗಮಿಸಿದ್ದ ನೂತನ ಸಂಸದ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಪಟ್ಟಣದ ಪ್ರವಾಸಿ ಮಂದಿರದ ಬಳಿ

ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್ಮುಲ್ ನಿರ್ದೇಶಕ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಅಭಿನಂದಿಸಿದರು.

ಈ ವೇಳೆ ಪಟಾಕಿ ಸಿಡಿಸಿ ಕುಮಾರಸ್ವಾಮಿ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದ ನಂತರ ನೂತನ ಎಚ್ಡಿಕೆಗೆ ಮಾಲಾರ್ಪಣೆ ಮಾಡಿ ಸಿಹಿ ತಿನಿಸಿದರು.

ಕುಮಾರಸ್ವಾಮಿ ಗೆಲುವಿನ ಬಗ್ಗೆ ಮಾತನಾಡಿದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಅತ್ಯಧಿಕ ಬಹುಮತದಿಂದ ಆಯ್ಕೆ ಮಾಡಲು ಮಂಡ್ಯ ಜಿಲ್ಲೆ ಮತ್ತು ಕೆ.ಆರ್. ನಗರ ಕ್ಷೇತ್ರದ ಮತದಾರರು ಕಾರಣಿ ಭೂತರಾಗಿದ್ದಾರೆ. ಈ ಎರಡು ಕ್ಷೇತ್ರಗಳ ಜನರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದ್ದಾರೆ. ಅವರ ಆಡಳಿತ ಅವಧಿಯಲ್ಲಿ ರೈತ ಪರವಾದ ಯೋಜನೆ ಜಾರಿಗೆ ತಂದು ಆಡಳಿತ ನಡೆಸಿದ್ದಾರೆ. ಇದರ ಕೃತಜ್ಞತೆಗಾಗಿ ಲೋಕಸಭಾ ಚುನಾವಣೆಯಲ್ಲಿ ರೈತ ಸಮುದಾಯ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ ಕೈ ಹಿಡಿದಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿನೇ ದಿನೇ ದಿವಾಳಿ ಹಂತಕ್ಕೆ ತಲುಪುತ್ತಿದೆ. ಮುಂದಿನ ದಿನಗಳಲ್ಲಿ ಈ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಾಲದ ಹೊರೆಯಿಂದ ಈಗಾಗಲೇ ಸರ್ಕಾರ ತತ್ತರಿಸುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಸಚಿವರುಗಳು ಮತ್ತು ಶಾಸಕರುಗಳು ಭ್ರಷ್ಟಚಾರದಲ್ಲಿ ಮುಳುಗಿದ್ದಾರೆ ಎಂದು ಕಿಡಿಕಾರಿದರು.

ಈ ವೇಳೆ ಜೆಡಿಎಸ್ ಕಾರ್ಯಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಮಹಿಳಾ ಘಟಕದ ಅಧ್ಯಕ್ಷ ದಿವ್ಯ ರಾಮಚಂದ್ರ ಶೆಟ್ಟಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಮುಖಂಡರಾದ ಕೆಂಗಲ್ ಗೌಡ, ಕೆಸ್ತೂರು ರಾಜಣ್ಣ, ಕೂಳಗೆರೆ ಶೇಖರ್, ಕೆಂಗಲ್ ಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆಂಪಣ್ಣ, ಪುರಸಭೆ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್, ಸದಸ್ಯ ಎಂ.ಐ. ಪ್ರವೀಣ್, ಬ್ಯಾಡರಹಳ್ಳಿ ರಾಮಕೃಷ್ಣ ಹಾಗೂ ಮೈತ್ರಿ ಪಕ್ಷಗಳ ಮುಖಂಡರುಗಳು ಇದ್ದರು.ಕ್ಯಾತನಹಳ್ಳಿ ಜಿಪಂ ಕ್ಷೇತ್ರದಲ್ಲೇ ಎಚ್ಡಿಗೆ ಹೆಚ್ಚು ಮತ ಗ್ರಾಮಸ್ಥರಿಗೆ ಗವಿಗೌಡ ಪ್ರವೀಣ್ ಧನ್ಯವಾದ

ಪಾಂಡವಪುರ:ಲೋಕಸಭಾ ಚುನಾವಣೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕ್ಯಾತನಹಳ್ಳಿ ಜಿಪಂ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕ ಮತಗಳ ಅಂತರ ನೀಡುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವಿಗೆ ಕಾರಣರಾದ ಎಲ್ಲಾ ಮತದಾರರು, ಜೆಡಿಎಸ್-ಬಿಜೆಪಿ ಪಕ್ಷದ ಮುಂಖಡರು, ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಜೆಡಿಎಸ್ ರಾಜ್ಯ ರೈತ ವಿಭಾಗದ ಮಾಜಿ ಉಪಾಧ್ಯಕ್ಷ ಕ್ಯಾತನಹಳ್ಳಿ ಗವಿಗೌಡ(ಪ್ರವೀಣ್) ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಅತ್ಯಧಿಕ ಮತಗಳ ಮುನ್ನಡೆಯಿಂದ ಗೆಲುವು ಸಾಧಿಸಿದ್ದಾರೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜಣ್ಣ ಅವರ ನೇತೃತ್ವದಲ್ಲಿ 50 ಸಾವಿರಕ್ಕೂ ಅಧಿಕ ಮತಗಳನ್ನು ಎಚ್ಡಿಕೆಗೆ ನೀಡಿದ್ದಾರೆ ಎಂದರು.ಕ್ಯಾತನಹಳ್ಳಿ ಜಿಪಂ ಕ್ಷೇತ್ರದಲ್ಲೂ ಸಾವಿರಾರು ಮತಗಳ ಮುನ್ನಡೆ ನೀಡಿದ್ದಾರೆ. ಶಾಸಕರ ತವರು ಕ್ಯಾತನಹಳ್ಳಿಯಲ್ಲಿ 111 ಮತಗಳ ಮುನ್ನಡೆ ನೀಡುವ ಮೂಲಕ ಎಚ್ ಡಿಕೆ ಗೆಲುವಿಗೆ ಸಹಕಾರಿಯಾಗಿದ್ದಾರೆ. ಎಚ್.ಡಿ.ಕೆ ಅವರ ಗೆಲುವಿಗೆ ಕ್ಷೇತ್ರದಲ್ಲಿ ಹಾಗೂ ಕ್ಯಾತನಹಳ್ಳಿ ಗ್ರಾಮದಲ್ಲಿ ಪಕ್ಷಾತೀತವಾಗಿ ಮತ ನೀಡಿದ್ದಾರೆ. ಮತ ನೀಡಿದವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಎನ್ ಡಿಎ ಸರ್ಕಾರ ಅಧಿಕಾರ ಹಿಡಿಯುತ್ತಿದೆ. ಮೋದಿ ಅವರ ಸಚಿವ ಸಂಪುಟದಲ್ಲಿ ಎಚ್ಡಿಕೆ ಅವರಿಗೆ ಕೃಷಿ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಢಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಂದ್ರ, ತಾಪಂ ಮಾಜಿ ಅಧ್ಯಕ್ಷೆ ಸುಶೀಲಮ್ಮ, ಮುಖಂಡರಾದ ಸುಬ್ಬಣ್ಣ, ರೇವಣ್ಣ, ರವೀಂದ್ರ, ಚೇತನ್, ಗುಂಡ್ಡ ಹೇಮ, ಜಲೇಂದ್ರ ಬಿಜೆಪಿಮುಖಂಡರಾದ ಮಂಜುನಾಥ್, ಮೋಹನ್ ಕುಮಾರ್,(ರ್‍ಯಾಂಬೋ), ಶಕುಂತಲ, ದೇವರಾಜು ಸೇರಿದಂತೆ ಇತರಿದ್ದರು.

Share this article