ಕೆಕೆಆರ್‌ಡಿಬಿಯಿಂದ 20 ಕೋಟಿ, ಕಂದಾಯ ಇಲಾಖೆಯಿಂದ 10 ಕೋಟಿ ಅನುದಾನ
ಅಮರೇಶ್ವರಸ್ವಾಮಿ ಕಂದಗಲ್ಲಮಠಕನ್ನಡಪ್ರಭ ವಾರ್ತೆ ಕುಕನೂರು
ನೂತನ ತಾಲೂಕು ಕುಕನೂರಿನಲ್ಲಿ ತಹಸೀಲ್ದಾರ್ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ 26.50 ಎಕರೆ ಜಮೀನು ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿದ್ದು, ಈ ಜಾಗದಲ್ಲಿ ಕಟ್ಟಡ ನಿರ್ಮಿಸಲು ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ₹ 30 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ.2024-25ನೇ ಸಾಲಿನಿಂದ ಕಂದಾಯ ಇಲಾಖೆಯಿಂದ ₹9.95 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಎರಡು ಆದೇಶದಲ್ಲಿ ₹ 9.95 ಕೋಟಿ ಮತ್ತು ₹ 9.95 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಅನ್ವಯ ಧಾರ್ಮಿಕ ಇಲಾಖೆಯ ಆಯುಕ್ತರು, ಕುಕನೂರು ಗ್ರಾಮದ ಶ್ರೀ ಗುದ್ದೇಶ್ವರ ದೇವಸ್ಥಾನಕ್ಕೆ ಸೇರಿದ 26.50 ಎಕರೆ ಜಮೀನನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಮಾಸಿಕ ಸಾವಿರ ರು. ಬಾಡಿಗೆ ನಿಗದಿ ಪಡಿಸಿ 30 ವರ್ಷಗಳ ಗುತ್ತಿಗೆ ನೀಡಲು ಅನುಮತಿ ನೀಡಿದ್ದಾರೆ. ಈ ಹಿನ್ನೆಲೆ ನೂತನವಾಗಿ ತಾಲೂಕಾಡಳಿತ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಅನುದಾನಕ್ಕಾಗಿ ರಾಯರಡ್ಡಿ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಈಗಾಗಲೇ ಕಟ್ಟಡದ ಮಾದರಿ ನೀಲನಕ್ಷೆ ಸಹ ತಯಾರಿಸಲಾಗಿದ್ದು, ಒಂದೇ ಸೂರಿನಲ್ಲಿ ತಾಲೂಕಾಡಳಿತ ಸೇರಿ ಎಲ್ಲ ಇಲಾಖೆಯ ಕಚೇರಿಗಳನ್ನೊಳಗೊಂಡ ಕಟ್ಟಡ ನಿರ್ಮಿಸಲು ₹30 ಕೋಟಿ ಅನುದಾನ ಮಂಜೂರಾತಿಯಾಗಿದೆ.2018ರಲ್ಲಿ ಉದ್ಘಾಟನೆ ಆಗಿದ್ದ ಕುಕನೂರು ತಾಲೂಕು:
ಕುಕನೂರು ನೂತನ ತಾಲೂಕು ಕೇಂದ್ರವಾಗಿ 2018, ಜನವರಿ 26ರಂದು ಕಾರ್ಯಾರಂಭ ಮಾಡಿತ್ತು. ಅಂದು ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ನೂತನ ಕುಕನೂರು ತಾಲೂಕನ್ನು ಉದ್ಘಾಟನೆ ಮಾಡಿದ್ದರು. ಪಟ್ಟಣದ ಯಲಬುರ್ಗಾ ರಸ್ತೆಯ ಕಾವ್ಯಾನಂದ ಕಲ್ಯಾಣ ಮಂಟಪದ ಭವನದಲ್ಲಿ ತಾಲೂಕು ಕೇಂದ್ರದ ತಹಸೀಲ್ದಾರ ಕಚೇರಿ ಕಳೆದ ವರ್ಷದವರೆಗೆ ಇತ್ತು. ಸದ್ಯ ಪಟ್ಟಣದ ಕನಕ ಭವನದಲ್ಲಿ ಕಾರ್ಯನಿರ್ವಹಿಸುತ್ತಿದೆ. ನೂತನ ತಾಲೂಕು ಕೇಂದ್ರವಾದ ಕುಕನೂರು ತಾಲೂಕಿಗೆ ಸದ್ಯ ತನ್ನದೇ ಆದ ಭವನ ಸಹ ನಿರ್ಮಾಣವಾಗುತ್ತಿರುವುದು ತಾಲೂಕಾಭಿವೃದ್ಧಿಗೆ ದಿಕ್ಸೂಚಿಯಾಗಿದೆ.ತಾಲೂಕು ಆಡಳಿತದ ಕಟ್ಟಡ ನಿರ್ಮಾಣವಾದ ನಂತರ ಪೀಠೋಪಕರಣ ಖರೀದಿಗೆ ಕಂದಾಯ ಇಲಾಖೆಯಿಂದ ₹5 ಕೋಟಿ ಹಣ ಮಂಜೂರು ಮಾಡಿಸಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ. ಅಲ್ಲದೆ ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶೀಘ್ರ ₹15 ಕೋಟಿ ಅನುದಾನದ ಮಂಜೂರಾತಿ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.