ರಾಮನಗರ: ಮಹಾತ್ಮ ಗಾಂಧೀಜಿ ಶಾಂತಿ, ಅಹಿಂಸೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಪಡೆದುಕೊಳ್ಳಬಹುದು ಎಂಬುದನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹೇಳಿದರು.
ಗಾಂಧೀಜಿಯವರು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಕೇವಲ ವ್ಯಕ್ತಿಯಾಗಿರಲಿಲ್ಲ ಇಡೀ ದೇಶದ ದೊಡ್ಡ ಶಕ್ತಿಯಾಗಿದ್ದರು. ಅವರು ಕೇವಲ ರಾಜಕೀಯ ವ್ಯಕ್ತಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಒಬ್ಬ ದಾರ್ಶನಿಕ, ಆರ್ಥಿಕ ತಜ್ಞ, ತತ್ವಜ್ಞಾನಿಯಾಗಿ ಶಾಂತಿಯುತ ಮಾರ್ಗದಿಂದ ಹೇಗೆ ಒಂದು ದೇಶವನ್ನು ಕಟ್ಟಬಹುದು ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಿದರು. ಅಂತಹ ಮಹಾತ್ಮರ ಜನ್ಮದಿನವನ್ನು ಇಂದು ಇಡೀ ವಿಶ್ವವೇ ವಿಶ್ವಶಾಂತಿ ದಿನಾಚರಣೆಯಾಗಿ ಆಚರಿಸುತ್ತಿದೆ. ಅವರು ನಮಗೆ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಕರೆ ನೀಡಿದರು.ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್, ಡಿವೈಎಸ್‌ಪಿ ದಿನಕರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗೌರವ ನಮನ ಸಲ್ಲಿಸಿದರು.
ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪನಿರ್ದೇಶಕರಾದ ರಮ್ಯ, ಜಿಲ್ಲಾ ಶಸ್ತçಚಿಕಿತ್ಸಾಧಿಕಾರಿ ಮಂಜುನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು ಟಿ.ಜಿ. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.ಮಹಾತ್ಮಾ ಗಾಂಧೀಜಿ ಅವರ ಜಯಂತಿ ಅಂಗವಾಗಿ ಪ್ರೌಢಶಾಲಾ ವಿಭಾಗ, ಪದವಿ ಪೂರ್ವ ಹಾಗೂ ಪದವಿ/ಸ್ನಾತಕೋತ್ತರ ಪದವಿ ವಿಭಾಗಗಳು ಹಾಗೂ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರ ವೃಂದದವರಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ನೌಕರರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಪದವಿಪೂರ್ವ ವಿಭಾಗ: ಮಾಗಡಿ ತಾಲೂಕಿನ ವಿದ್ಯಾಚೇತನ ಪಿ.ಯು ಕಾಲೇಜಿನ ಆರ್. ಅಮೂಲ್ಯ ಪ್ರಥಮ, ರಾಮನಗರದ ನ್ಯೂ ಎಕ್ಸ್ಫರ್ಟ್ ಪದವಿ ಪೂರ್ವ ಕಾಲೇಜಿನ ಸಿಂಚನ ದ್ವಿತೀಯ, ಬಿಡದಿಯ ಶ್ರೀ ಬಸವೇಶ್ವರ ಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಇಂಚರ ತೃತೀಯ ಸ್ಥಾನ ಪಡೆದರು.
ಸರ್ಕಾರದ ಅಧಿಕಾರಿ/ನೌಕರ ವೃಂದ ವಿಭಾಗ: ರಾಮನಗರ ಡಯಟ್‌ನ ಹಿರಿಯ ಉಪನ್ಯಾಸಕರಾದ ಜಯಲಕ್ಷ್ಮಿ ಪ್ರಥಮ ಬಹುಮಾನ, ರಾಮನಗರ ನಗರಸಭೆಯ ಪೌರಾಯುಕ್ತ ಡಾ. ಜಯಣ್ಣ ದ್ವಿತೀಯ ಬಹುಮಾನ ಹಾಗೂ ಕೆಂಗಲ್ ಆಂಜನೇಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಕೆ. ರಘುಗೆ ತೃತೀಯ ಬಹುಮಾನ ಲಭಿಸಿದ್ದು, ಇವರಿಗೆ ಪ್ರಥಮ ಬಹುಮಾನ ಮೂರು ಸಾವಿರ ರು., ದ್ವಿತಿಯ ಬಹುಮಾನ ಎರಡು ಸಾವಿರ ರು.,ತೃತೀಯ ಬಹುಮಾನ ಒಂದು ಸಾವಿರ ರು. ವಿತರಿಸಲಾಯಿತು.