ಕನ್ನಡಪ್ರಭ ವಾರ್ತೆ ಶಿರಾಯೋಗವು ಮಾನವನ ದೇಹದಲ್ಲಿನ ಹಲವು ತೊಂದರೆಗಳನ್ನು ಸುಧಾರಿಸಿ, ಆರೋಗ್ಯವನ್ನು ಸಂಪೂರ್ಣವಾಗಿ ಸಂರಕ್ಷಿಸಿಕೊಳ್ಳಲು ಸದಾ ಕಾಲ ಸಹಾಯ ಮಾಡುತ್ತದೆ. ದೇಹವನ್ನು ಆತ್ಮದೊಂದಿಗೆ ಒಂದುಗೂಡಿಸುವ ಅದ್ಭುತವಾದ ನೈಸರ್ಗಿಕ ಶಕ್ತಿಯಾಗಿದೆ ಎಂದು ತಹಸೀಲ್ದಾರ್ ಡಾ.ದತ್ತಾತ್ರೆಯ ಗಾದಾ ಹೇಳಿದರು. ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜೀನಿ ಮಿಲೇಟ್ಸ್ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯೋಗವು ಮನುಷ್ಯನ ದೈನಂದಿನ ಚಟುವಟಿಕೆಯ ಭಾಗವಾಗಬೇಕು. ದಿನ ನಿತ್ಯ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯ ಉಂಟಾಗಿ ಜೀವನ ಸುಂದರವಾಗಿರುತ್ತದೆ. ಇದು ಮಾನವನಿಗೆ ಆಂತರಿಕ ಶಾಂತಿಯನ್ನು ಪಡೆಯುವ ಶ್ರೇಷ್ಠ ಸಾಧನವಾಗಿದೆ ಎಂದರು. ನಗರಸಭಾ ಅಧ್ಯಕ್ಷೆ ಪೂಜಾ ಪೆದ್ದರಾಜು ಮಾತನಾಡಿ, ಯೋಗವು ದೇಹ ಮತ್ತು ಮನಸ್ಸು ಹೆಚ್ಚು ಸ್ಥಿರವಾಗಿರಲು ಸಹಾಯ ಮಾಡುತ್ತದೆ. ಯೋಗ ಮಾಡುವ ವ್ಯಕ್ತಿಯು ಯಾವಾಗಲೂ ಒತ್ತಡದಿಂದ ಮುಕ್ತನಾಗಿ ಸಂತೋಷವಾಗಿರುತ್ತಾನೆ. ಅಲ್ಲದೆ ಯೋಗವು ಮನುಷ್ಯನನ್ನು ಅನೇಕ ರೋಗಗಳಿಂದ ಮುಕ್ತಗೊಳಿಸುತ್ತದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ ಮಾತನಾಡಿ, ಯೋಗವು ಒತ್ತಡವನ್ನು ನಿವಾರಿಸುವ, ಏಕಾಗ್ರತೆಯನ್ನು ಹೆಚ್ಚಿಸುವ ಅತ್ಯುತ್ತಮ ಚಟುವಟಿಕೆಯಾಗಿದೆ ಎಂದರು. ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಲಕ್ಷ್ಮಣ್ ಮಾತನಾಡಿ, 2014ರಲ್ಲಿ ಜಾರಿಗೆ ಬಂದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ನಿತ್ಯ ಯೋಗ ಮಾಡುವುದರಿಂದ ಅರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಮನಸ್ಸು ಮತ್ತು ದೇಹವನ್ನು ಸಮನ್ವಯ ಕಾಯ್ದುಕೊಳ್ಳಬಹುದು. ಪತಂಜಲಿ ಯೋಗ ಶಿಕ್ಷಣ ಕೇಂದ್ರವು ಕಳೆದ 44 ವರ್ಷಗಳಿಂದ ಉಚಿತವಾಗಿ ಎಲ್ಲರಿಗೂ ಯೋಗ ಶಿಕ್ಷಣ ಕಲಿಸಲಾಗುತ್ತಿದೆ ಎಂದರು. ಶ್ರೀ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಲ್.ರಂಗನಾಥ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕವಿತಾ ಲಕ್ಷ್ಮಣ್, ಕಡೇಮನೆ ಎಸ್.ರವಿಕುಮಾರ್, ಸುಶೀಲಮ್ಮ, ಗೋವಿಂದರಾಜು, ಹೊನ್ನ ಗಂಗಪ್ಪ, ದೊಡ್ಡ ಕಾಮಣ್ಣ, ಸೀತಾರಾಮು, ನಿವೃತ್ತ ಎಂಜಿನಿಯರ್ ಜಯರಾಮಯ್ಯ, ಆರ್.ವಿ.ಪುಟ್ಟಕಾಮಣ್ಣ, ಕಂದಾಯ ನಿರೀಕ್ಷಕ ಮಂಜುನಾಥ್, ನರೇಂದ್ರ ರಾವ್ ಹಾಜರಿದ್ದರು.