ಜೀವನದಲ್ಲಿ ಯೋಗಭ್ಯಾಸದಿಂದ ಸದೃಢರಾಗಲು ಸಾಧ್ಯ : ತಮ್ಮಯ್ಯ

KannadaprabhaNewsNetwork |  
Published : Jun 22, 2024, 12:46 AM IST
 ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯದಿಂದಿರಲು ಯೋಗ ಅತೀ ಮುಖ್ಯವಾಗಿದ್ದು, ದಿನ ನಿತ್ಯದ ಜೀವನದಲ್ಲಿ ಯೋಗ ಭ್ಯಾಸವನ್ನು ಅಳವಡಿಸಿಕೊಂಡಲ್ಲಿ ಸದೃಢರಾಗಿರಲು ಸಾಧ್ಯ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.

ಜಿಲ್ಲಾಡಳಿತದಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯದಿಂದಿರಲು ಯೋಗ ಅತೀ ಮುಖ್ಯವಾಗಿದ್ದು, ದಿನ ನಿತ್ಯದ ಜೀವನದಲ್ಲಿ ಯೋಗ ಭ್ಯಾಸವನ್ನು ಅಳವಡಿಸಿಕೊಂಡಲ್ಲಿ ಸದೃಢರಾಗಿರಲು ಸಾಧ್ಯ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದಿನನಿತ್ಯದ ಜೀವನದಲ್ಲಿ ಯೋಗಾಭ್ಯಾಸ ಅಳವಡಿಸಿಕೊಂಡಲ್ಲಿ ಮನಸ್ಸಿನಲ್ಲಿ ಏಕಾಗ್ರತೆ ಮೂಡಿ ಆತಂಕ ದೂರವಾಗುತ್ತದೆ. ಮನಸ್ಸು, ಶರೀರ, ಆತ್ಮ ಒಂದುಗೂಡುವುದೇ ಯೋಗ. ನಮ್ಮ ದೇಹ, ಮನಸ್ಸು ನಿರ್ವಹಣೆಗೆ ಯಾವುದೇ ಔಷಧಿಗಳಿಲ್ಲದೆ ಪ್ರತಿನಿತ್ಯ ಯೋಗ ಮಾಡುವುದರಿಂದ ತುಂಬಾ ಲಾಭವಾಗುತ್ತದೆ. ಸ್ವಯಂ ಪ್ರೇರಿತರಾಗಿ ಪ್ರತಿಯೊಬ್ಬರು ಯೋಗವನ್ನು ದಿನನಿತ್ಯದ ಜೀವನ ಶೈಲಿಯಾಗಿ ಅಳವಡಿಸಿಕೊಳ್ಳುವ ಜೊತೆಗೆ ನಿಮ್ಮ ಸುತ್ತಮುತ್ತಲಿನ ವರಿಗೂ ಯೋಗದ ಮಹತ್ವ ತಿಳಿಸಿ. ಆಧುನಿಕ ಜೀವನ ಶೈಲಿಯಿಂದ ದೂರವಿದ್ದು, ಉತ್ತಮ ಜೀವನದತ್ತ ಹೆಜ್ಜೆ ಹಾಕಬೇಕಾಗಿದೆ. ಒಂದು ದಿನಕ್ಕೆ ಮಾತ್ರ ಯೋಗ ಸೀಮಿತ ವಾಗಿರದೆ ದಿನನಿತ್ಯ ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಯೋಗ ಆಯುರ್ವೇದದ ಅವಿಭಾಗ್ಯ ಅಂಗ. ಇಡೀ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ತನಗಾಗಿ ಮತ್ತು ಸಮಾಜಕ್ಕಾಗಿ ಯೋಗ ಎಂಬುದು 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಘೋಷ ವಾಕ್ಯವಾಗಿದ್ದು, ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ದೈಹಿಕ ಆರೋಗ್ಯವನ್ನು ಮೀರಿ ಯೋಗ ಮಾನಸಿಕ ಯೋಗ ಕ್ಷೇಮಕ್ಕೆ ಗಮನಾರ್ಹವಾಗಿ ಪ್ರಯೋಜನ ನೀಡುತ್ತದೆ. ಇದು ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕಾಗ್ರತೆ ಹೆಚ್ಚಿಸುತ್ತದೆ ಮತ್ತು ಮಾನಸಿಕವಾಗಿ ಸ್ಪಷ್ಟತೆ ಉತ್ತೇಜಿಸುತ್ತದೆ. ಆತಂಕ ಮತ್ತು ಖಿನ್ನತೆ ಹೋಗಲಾಡಿಸಲು ನಿರ್ಣಾಯಕ ವಾಗಿದ್ದು ಪ್ರತಿನಿತ್ಯ ಯೋಗ ಮಾಡಬೇಕೆಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ವಿಶ್ವಸಂಸ್ಥೆ 2014 ರಲ್ಲಿ ಸರ್ವಾನುಮತದಿಂದ ಜೂನ್ 21 ನ್ನು ಯೋಗ ದಿನಾಚರಣೆಯಾಗಿ ಘೋಷಣೆ ಮಾಡಿದೆ. ಇಂದು ವಿಶ್ವದ 187 ದೇಶಗಳಲ್ಲಿ ಯೋಗ ದಿನ ಆಚರಿಸಲಾಗುತ್ತದೆ. ಯೋಗ ನಿಯಮಿತವಾಗಿ ಮಾಡುವುದರಿಂದ ರಕ್ತ ಚಲನೆ, ಜೀರ್ಣಕ್ರಿಯೆ ಸರಾಗವಾಗಿ ದೈಹಿಕ ಸ್ಥಿತಿಗತಿ ಉತ್ತಮವಾಗುತ್ತದೆ. ಅಲ್ಲದೆ ಒತ್ತಡದ ಜೀವನ ಶೈಲಿಯಿಂದ ಪಾರಾಗಿ ಮಾನಸಿಕ ನೆಮ್ಮದಿ ಪಡೆಯಲು ಯೋಗ ಸಹಕಾರಿ ಎಂದು ತಿಳಿಸಿದರು. ಆಯುಷ್ ಇಲಾಖೆ ಅಧಿಕಾರಿ ಡಾ. ಹೇಮಾ ಮಾತನಾಡಿ, ಪ್ರತಿನಿತ್ಯ ಯೋಗ ಮಾಡುವುದರಿಂದ ಮಧುಮೇಹ, ರಕ್ತ ದೊತ್ತಡ, ಹೃದಯ ಸಂಬಂಧಿ ಖಾಯಿಲೆ ಹಾಗೂ ಮಾನಸಿಕ ಒತ್ತಡದ ನಿವಾರಣೆಗೆ ಯೋಗ ಉಪಯುಕ್ತ. ಅಲ್ಲದೆ ಬದಲಾದ ಜೀವನ ಶೈಲಿಯನ್ನು ಹತೋಟಿಗೆ ತರಲು ಯೋಗ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮ್ಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶ್ವಥ್ ಬಾಬು, ಆಯುಷ್ ಅಧಿಕಾರಿ ಡಾ. ಗೀತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.--- ಬಾಕ್ಸ್‌ --ಶಕ್ತರಾದ ಪ್ರಜೆಗಳಿಂದ ನಾಡು ಸಮರ್ಥದೈಹಿಕ ಮತ್ತು ಮಾನಸಿಕವಾಗಿ ಶಕ್ತರಾದ ಪ್ರಜೆಗಳಿಂದ ನಾಡು ಸಮರ್ಥ ಹಾಗೂ ಸಾಮರಸ್ಯ ಹೊಂದಿರಲು ಸಾಧ್ಯ ಎಂದು ಮಾಡೆಲ್ ಶಾಲಾ ಸಂಸ್ಥಾಪಕ, ಭಾರತ್ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ. ಎಂ.ಎನ್. ಷಡಕ್ಷರಿ ಹೇಳಿದರು.ನಗರದ ಉಪ್ಪಳ್ಳಿ ಮಾಡೆಲ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನದಲ್ಲಿ ಘಂಟಾನಾದದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ಪುರಾತನ ಕಾಲದಿಂದ ಋಷಿ ಮುನಿಗಳು ಅಭ್ಯಾಸ ಮಾಡಿಕೊಂಡು ಬಂದ ಈ ಯೋಗವನ್ನು. ಅದರಿಂದ ನಮ್ಮ ಜೀವನ ದಲ್ಲಾಗುವ ಗುಣಾತ್ಮಕ ಆಂಶಗಳನ್ನು ಅರಿತು ನಿತ್ಯ ಧ್ಯಾನ ಮತ್ತು ಯೋಗಾಭ್ಯಾಸ ಆಳವಡಿಸಿಕೊಂಡಲ್ಲಿ ಸಮಾಜದ ಏಳಿಗೆಗೆ ಪೂರಕ ಪ್ರಜೆಗಳಾಗಬಹುದು ಎಂದರು.

ವಿಶ್ವ ಯೋಗ ದಿನದ ಉಸ್ತುವಾರಿ ವಹಿಸಿದ್ದ ಶಾಲಾ ದೈಹಿಕ ಶಿಕ್ಷಕ ನಿರಂಜನ್, ಮುಖ್ಯ ಶಿಕ್ಷಕ ಯೋಗೀಶ್ ಮತ್ತು ಎಲ್ಲಾ ಶಾಲಾ ಶಿಕ್ಷಕರು ಯೋಗ ತಾಲೀಮಿನಲ್ಲಿ ಪಾಲ್ಗೊಂಡಿದ್ದರು.

--

ಯಲಗುಡಿಗೆ ಶಾಲೆಯಲ್ಲಿ ಯೋಗ ದಿನಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 10ನೆಯ ವರ್ಷದ ವಿಶ್ವ ಯೋಗ ದಿನ ಆಚರಿಸಲಾಯಿತು.

ಶಾಲಾ ಮಕ್ಕಳಿಗೆ ದಾನಿಗಳಿಂದ ಸಂಗ್ರಹಿಸಿದ ಹಸಿರು ಬಣ್ಣದ ಟೀ ಶರ್ಟ್ ಮತ್ತು ಪ್ಯಾಂಟ್ ಒಳಗೊಂಡ ಸಮವಸ್ತ್ರದ , ನೋಟ್ ಪುಸ್ತಕಗಳು ಲೇಖನ ಸಾಮಗ್ರಿಗಳನ್ನು ಇದೇ ದಿನ ವಿತರಿಸಲಾಯಿತು.

ಶಾಲಾ ಶಿಕ್ಷಕ ಮಂಜಪ್ಪ, ಗೀತಾ ರವರ ಮಾರ್ಗದರ್ಶನದಲ್ಲಿ ಮಕ್ಕಳು ಯೋಗದ ವಿವಿಧ ಆಸನಗಳ ಜೊತೆಗೆ ಸೂರ್ಯ ನಮಸ್ಕಾರ ಮಾಡಿದರು. ಪ್ರತಿ ಶನಿವಾರ ಶಾಲೆಯಲ್ಲಿ ಯೋಗಾಭ್ಯಾಸ ಮಾಡಿಸಲಾಗುತ್ತದೆ ಎಂದು ಶಾಲಾ ಶಿಕ್ಷಕಿ ಕೆ.ಎಚ್‌. ಗೀತಾ ತಿಳಿಸಿದರು. ಕಾರ್ಯಕ್ರಮದಲ್ಲಿ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಪದ್ಮ ಪ್ರಕಾಶ್ ಭಾಗವಹಿಸಿದ್ದರು.

21 ಕೆಸಿಕೆಎಂ 2 ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಇದ್ದರು.

PREV

Recommended Stories

‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ
ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ