ಅಂತರಗಂಗೆಯಲ್ಲಿ ಮಿಂದೆದ್ದ ಭಕ್ತ ಸಮೂಹ

KannadaprabhaNewsNetwork | Published : Mar 1, 2025 1:02 AM

ಸಾರಾಂಶ

ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳವಾದ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬಂದು ಬೀಡು ಬಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳವಾದ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬಂದು ಬೀಡು ಬಿಟ್ಟಿದ್ದಾರೆ.

ಶುಕ್ರವಾರದಂದು ಅಮಾವಾಸ್ಯೆ ಹಿನ್ನೆಲೆ ಸಹಸ್ರಾರು ಮಂದಿ ಭಕ್ತರು ಪರ ಉತ್ಸವ ಮಾಡುವ ಸ್ಥಳಕ್ಕೆ ನೃತ್ಯ ಮಾಡುತ್ತಾ ಬಂದಿದ್ದು ಯುವಕನೋರ್ವ ತನ್ನ ಅಜ್ಜಿಯನ್ನು ತಮಟೆ ಸದ್ದಿಗೆ ಹೊತ್ತು ಕುಣಿದು ಕುಪ್ಪಳಿಸಿದ್ದು ಗಮನ ಸೆಳೆಯಿತು. ಸ್ವಾಮಿಗೆ ಅಭಿಷೇಕ, ಪೂಜೆಗಳು ಶ್ರದ್ಧಾ ಭಕ್ತಿಯಿಂದ ನಡೆದಿದ್ದು ದೇಗುಲ ಆವರಣ ಹೂವಿನ ಅಲಂಕಾರ, ಜಗಮಗಿಸುವ ದೀಪಗಳಿಂದ ಕಂಗೊಳಿಸುತ್ತಿದೆ.

ಅಮಾವಾಸ್ಯೆಗೆ ಅಂತರಗಂಗೆಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು. ಭಕ್ತರಿಗೆ ನಿರಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಎರಡನೇ ಬಾರಿ ಪ್ರಸಾದ ಸ್ವೀಕಾರಕ್ಕೆ ಅಂತಲೇ ಪ್ರತ್ಯೇಕ ಕೌಂಟರ್ ಕೂಡ ಶುಕ್ರವಾರದಿಂದ ಭಕ್ತಾದಿಗಳಿಗೆ ತೆರೆಯಲಾಗಿದೆ.

ಬರ ಬಿಸಿಲು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಭಕ್ತರು ಮಾದಪ್ಪನ ದರ್ಶನ ಪಡೆದು ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳು ಧರ್ಮದರ್ಶನ ಹಾಗೂ ಅಭಿಷೇಕ ಟಿಕೆಟ್ ಪಡೆದವರಿಗೆ ಗೇಟ್ ನಂಬರ್ ಒಂದರಲ್ಲಿ ಪುದುವಟ್ಟು ಅಭಿಷೇಕ ಟಿಕೆಟ್ ಪಡೆದವರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೇರ್ ನಂ. 4 ರಲ್ಲಿ ವಿಐಪಿ ಮತ್ತು ವಿವಿಐಪಿಗಳಿಗೆ ಪ್ರವೇಶ ದ್ವಾರ ನೇರದರ್ಶನ ರಾಜಗೋಪುರ ಮೂಲಕ 500 ರು. ಪಡೆದ ಭಕ್ತಾದಿಗಳಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಟಿಕೆಟ್ ಪಡೆದವರಿಗೂ ಉಚಿತ ಪ್ರವೇಶವನ್ನು ರಾಜಗೋಪುರದ ಮೂಲಕ ವಿಶೇಷ ದರ್ಶನದ ವ್ಯವಸ್ಥೆಯನ್ನು ಸಹ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತಾದಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಿತ್ತು.ರಾಶಿ ರಾಶಿ ತರಕಾರಿ:

ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ದಾಸೋಹ ಭವನದಲ್ಲಿ ರಾಶಿ ರಾಶಿ ತರಕಾರಿಗಳನ್ನು ಭಕ್ತಾದಿಗಳು ದೇಗುಲಕ್ಕೆ ನೀಡುತ್ತಿದ್ದಾರೆ. ಎಲ್ಲಾ ತರಕಾರಿಗಳನ್ನು ಬಳಸಿ ವಿಶೇಷ ದಾಸೋಹ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

ಭಕ್ತಾದಿಗಳ ಅನುಕೂಲಕ್ಕಾಗಿ ವಿವಿಧ ಬಗೆಯ ತರಕಾರಿಗಳ ಪಲ್ಯ ಮತ್ತು ಅನ್ನ ಸಾಂಬಾರ್ ಬೆಳಗಿನ ಉಪಹಾರ ಸೇರಿದಂತೆ ವಿಶೇಷ ದಾಸೋಹ ವ್ಯವಸ್ಥೆಗೆ ಭಕ್ತಾದಿಗಳು ನೀಡುವ ತರಕಾರಿಗಳಿಂದಲೇ ವ್ಯವಸ್ಥೆಯನ್ನು ಸಹ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಾಡಲಾಗಿದೆ. ಭಕ್ತಾದಿಗಳು ಪೂರಕವಾಗಿ ಸ್ಪಂದಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ ರಘು ತಿಳಿಸಿದರು.

Share this article