ಸ್ವಾವಲಂಬಿಯಾಗಿ ಬೆಳೆಯುತ್ತಿರುವ ಕೃಷಿಕ ಸಮಾಜ

KannadaprabhaNewsNetwork | Published : Feb 29, 2024 2:05 AM

ಸಾರಾಂಶ

ಕೃಷಿ ಇಲಾಖೆಯು ರೈತರ ಅಭಿವೃದ್ಧಿಗಾಗಿ ಹುಟ್ಟಿಕೊಂಡಿರುವ ಸಂಸ್ಥೆಯಾಗಿದ್ದು ರೈತರಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳನ್ನು ನೀಡುತ್ತಿದೆ. ಅವಕಾಶ ಸಿಕ್ಕಿದಾಗ ಏನಾದರೂ ಅಭಿವೃದ್ಧಿ ಕೆಲಸಗಳು ಮಾಡಿದರೆ ನಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ

ಕನ್ನಡ ಪ್ರಭವಾರ್ತೆ,ಮಾಲೂರು

ಇಲ್ಲಿನ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿಯು ಪಕ್ಷಾತೀತವಾಗಿರುವುದರಿಂದಲೇ ಸ್ವಂತ ನಿಧಿಯಿಂದ ಸುಸಜ್ಜಿತ ಕಟ್ಟಡ ನಿರ್ಮಿಸುವುದರ ಜೊತೆಗೆ ರೈತರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು,ಈ ಮೂಲಕ ರಾಜ್ಯದಲ್ಲಿ ಮಾದರಿ ಕೃಷಿಕ ಸಮಾಜವಾಗಿ ಮೊದಲ ಸ್ಥಾನದಲ್ಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ ಮಾರುತಿ ಬಡಾವಣೆ ರಸ್ತೆಯಲ್ಲಿರುವ ತಾಲೂಕು ಕೃಷಿಕ ಸಮಾಜದ ಹೆಚ್ಚುವರಿ ಕಟ್ಟಡ ಹಾಗೂ ಕೃಷಿಕ ಸಮಾಜದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಅವಕಾಶ ಸಿಕ್ಕಿದಾಗ ಏನಾದರೂ ಅಭಿವೃದ್ಧಿ ಕೆಲಸಗಳು ಮಾಡಿದರೆ ನಮ್ಮ ಹೆಸರು ಸಮಾಜದಲ್ಲಿ ಹಾಗೂ ಜನರ ಮನಸ್ಸುಗಳಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ ಎಂದರು.

ರೈತರ ತರಬೇತಿ ಕೇಂದ್ರ

ಈ ನಿಟ್ಟಿನಲ್ಲಿ ಇಲ್ಲಿನ ಕೃಷಿಕ ಸಮಾಜ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಪಕ್ಷಾತೀತವಾಗಿ ಸ್ವಂತ ನಿಧಿಯಿಂದ ಕಟ್ಟಡ ನಿರ್ಮಾಣ ಮಾಡುವುದರ ಜೊತೆಗೆ ರೈತರಿಗೆ ಪ್ರಯೋಜನವಾಗುವ ಸವಲತ್ತುಗಳು ಸಹ ನೀಡುತ್ತಿರುವುದು ಸಂತೋಷದ ವಿಷಯ. ನಮ್ಮ ತಾಲೂಕಿಗೆ ಕೃಷಿಗೆ ಸಂಬಂಧಿಸಿದಂತೆ ಸರ್ಕಾರದ ೩೦ ಎಕರೆ ಜಮೀನು ಇದೆ, ಹಿಂದಿನ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರು ರೈತರ ಟ್ರೈನಿಂಗ್ ಸೆಂಟರ್ ಮಾಡಲು ಜಮೀನು ಮಂಜೂರು ಮಾಡುವುದಾಗಿ ಹೇಳಿದ್ದರು. ಈಗಿನ ನಮ್ಮ ಸರ್ಕಾರದಲ್ಲಿ ಪ್ರಾಸ್ತಾಪಿಸಿ ಸರ್ಕಾರದಿಂದ ಜಮೀನು ಮಂಜೂರು ಮಾಡಿಸುವುದರ ಮೂಲಕ ರಾಜ್ಯ ಸರ್ಕಾರದ ಕೃಷಿ ಇಲಾಖೆ ರೈತರ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು,

ಕೃಷಿ ಇಲಾಖೆಯು ರೈತರ ಅಭಿವೃದ್ಧಿಗಾಗಿ ಹುಟ್ಟಿಕೊಂಡಿರುವ ಸಂಸ್ಥೆಯಾಗಿದ್ದು ರೈತರಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳನ್ನು ನೀಡುತ್ತಿದೆ. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಎಂಟು ತಿಂಗಳಲ್ಲಿ ಕ್ಷೇತ್ರಕ್ಕೆ ಅನುಷ್ಟಾನ ಗೊಳಿಸಿರುವ ಸರ್ಕಾರದ ಯೋಜನೆಗಳು ಇನ್ನೂ ಆರು ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದ ಶಾಸಕ ನಂಜೇಗೌಡ, ೩೦೦ ಕೋಟಿ ರೂಗಳ ವೆಚ್ಚದಲ್ಲಿ ಎಪಿಎಂಸಿ ಕಚೇರಿಯಿಂದ ರೈಲ್ವೆ ಸೇತುವೆ ವರೆಗಿನ ಮೇಲ್ಸೇತುವೆ ರಸ್ತೆ ನಿರ್ಮಾಣವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿ ಪಾಪಣ್ಣ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ರಾಜ್ಯ ನಿರ್ದೇಶಕ ವಡಗೂರು ನಾಗರಾಜ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಆನೇಪುರ ಹನುಮಂತಪ್ಪ, ಉಪಾಧ್ಯಕ್ಷ ಬಿ.ವಿ.ಪಾಪಣ್ಣ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಮ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ವಿ ಮಂಜುನಾಥ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ದಿವ್ಯ, ತಾಲೂಕು ಕೃಷಿಕ ಸಮಾಜದ ನಿರ್ದೇಶಕರುಗಳಾದ ಪಿ.ನಾರಾಯಣಸ್ವಾಮಿ, ಇನ್ನಿತರಿದ್ದರು.

Share this article