ಹಿಂದೂ ಧರ್ಮದ ಮರ್ಮ ಜಗತ್ತಿಗೆ ದಾರಿ ದೀಪ: ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ

KannadaprabhaNewsNetwork | Published : Jan 14, 2025 1:02 AM

ಸಾರಾಂಶ

ಶ್ರೀರಾಮ ವೈದ್ಯನಾಥ ಭಜನಾ ಮಂದಿರ ಸುಜೀರು ಇದರ 75ನೇ ವರ್ಷದ ಏಕಾಹ ಭಜನಾ ಮಹೋತ್ಸವ ಹಾಗೂ ಲೋಕ ಕಲ್ಯಾಣಾರ್ಥ ಶತ ರುದ್ರಯಾಗದ ಪ್ರಯುಕ್ತ ಭಾನುವಾರ ಧಾರ್ಮಿಕ ಸಭೆ ನೆರವೇರಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಭಾರತವು ಧರ್ಮದಿಂದ ಗುರುತಿಸಲ್ಪಟ್ಟ ರಾಷ್ಟ್ರ, ಹಿಂದೂ ಧರ್ಮವು ಆದ್ಯಾತ್ಮಿಕ ಶಕ್ತಿಯ ನೆಲೆ, ಧರ್ಮದ ಆಚಾರ ವಿಚಾರಗಳಿಗೆ ನಮ್ಮಲ್ಲಿ ಉತ್ತರವಿದೆ, ಜಗತ್ತಿಗೆ ಗುರುವಿನ ಸ್ಥಾನದಲ್ಲಿ ಅಲಂಕರಿಸುವ ಶಕ್ತಿ ಭಾರತದ ಪುಣ್ಯ ಮಣ್ಣಿಗಿದೆ. ಹಿಂದೂ ಧರ್ಮದ ಮರ್ಮ ಜಗತ್ತಿಗೆ ದಾರಿ ದೀಪ ಎಂದು ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ ಹೇಳಿದರು.

ಅವರು ಶ್ರೀರಾಮ ವೈದ್ಯನಾಥ ಭಜನಾ ಮಂದಿರ ಸುಜೀರು ಇದರ 75ನೇ ವರ್ಷದ ಏಕಾಹ ಭಜನಾ ಮಹೋತ್ಸವ ಹಾಗೂ ಲೋಕ ಕಲ್ಯಾಣಾರ್ಥ ಶತ ರುದ್ರಯಾಗದ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಶ್ರೀ ರಾಮನ ಕಪಿ ಸೇನೆಯಂತೆ ಇಲ್ಲಿಯೂ ಕೂಡ ಯುವ ಭಕ್ತ ಸಮೂಹದ ಶಕ್ತಿ ಇದೆ. ಸಮಾಜಕ್ಕೆ ಒಳಿತು ಮಾಡುವ, ಹಿಂದುವಿನ ಸಂಸ್ಕಾರವನ್ನು ಉನ್ನತಿಗೆ ಕೊಂಡೊಯ್ಯುವ ಕೆಲಸ ನಿತ್ಯ ನಿರಂತರ ಸಾಗಲಿ. ಮೃತ್ಯುವನ್ನು ಜಯಿಸುವ ರುದ್ರಯಾಗ ಎಲ್ಲರಿಗೂ ಕಲ್ಯಾಣವನ್ನುಟು ಮಾಡಲಿ, ಶ್ರೀ ರಾಮನ ಆದರ್ಶದಂತೆ,ಈ ಮಣ್ಣಿನ ಸಂಸ್ಕೃತಿ ಪರಂಪರೆಯನ್ನು ಅರಿತು ಬದುಕಿ ಸಮಾಜಕ್ಕೆ ಮಾದರಿಯಾಗುವ, ಎಲ್ಲವನ್ನು ಗೆಲ್ಲುವ ಪವಿತ್ರ ಭೂಮಿ ಇದಾಗಲಿ ಎಂದು ಹೇಳಿದರು.

ಮುಖ್ಯ ಅತಿಥಿ ರೋಟರಿ ಜಿಲ್ಲೆ ಮಾಜಿ ಗವರ್ನರ್, ಪ್ರಕಾಶ್ ಕಾರಂತ ಮಾತನಾಡಿ, ಯಾಗಗಳಿಂದ ದೇಹ, ಮನಸ್ಸು, ಪರಿಸರ ಶುದ್ಧಿಯಾಗಿ ಭಕ್ತರ ಸಕಾರತ್ಮಕ ಬೆಳವಣಿಗೆ ಸಾಧ್ಯ. ಧಾರ್ಮಿಕ ಸೇವೆಯೊಂದಿಗೆ ಸಾಮಾಜಿಕ ಶೈಕ್ಷಣಿಕ ಅರೋಗ್ಯ ಕಾರ್ಯಗಳು ಇಲ್ಲಿ ನಿರಂತರ ನಡೆಯಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಸುಜೀರು ಗುತ್ತಿನ ಯಜಮಾನ ರಾಮಕೃಷ್ಣ ಚೌಟ ಮಾತನಾಡಿ, ರುದ್ರಯಾಗದಿಂದ ಸರ್ವರಿಗೂ ಸುಖ ಶಾಂತಿ ಸಿಗಲಿ, ಇಲ್ಲಿನ ಜನರ ಪ್ರಾಮಾಣಿಕ ಪರಿಶ್ರಮ ಹಾಗೂ ಒಗ್ಗಟ್ಟಿನಿಂದ ದೈವ ದೇವರು ಪ್ರಸನ್ನರಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಧಾರ್ಮಿಕ ಸಾಮಾಜಿಕ ಕಾರ್ಯ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಇನ್ನೊರ್ವ ಅತಿಥಿ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ದ.ಕ. ಅಧ್ಯಕ್ಷ ಮಯೂರ್ ಉಳ್ಳಾಲ್ ಶುಭ ಹಾರೈಸಿದರು. ರವೀಂದ್ರ ಕಂಬಳಿ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಮಹೋತ್ಸವ ಸಮಿತಿ ಅಧ್ಯಕ್ಷ ಐತ್ತಪ್ಪ ಆಳ್ವ ಸುಜೀರುಗುತ್ತು, ಶ್ರೀ ಅರಸು ವೈದ್ಯನಾಥ ದೈವದ ಪಾತ್ರಿ ಮೋನಪ್ಪ ಯಾನೆ ಮುಂಡ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ರವೀಂದ್ರ ಕಂಬಳಿ ಸುಜೀರುಗುತ್ತು ಅವರನ್ನು ಅಭಿನಂದಿಸಲಾಯಿತು.

ಪ್ರ.ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು ಸ್ವಾಗತಿಸಿದರು. ಕೋಶಾಧಿಕಾರಿ ಪ್ರಮೋದ್ ಕುಮಾರ್ ಸುಜೀರು ವಂದಿಸಿದರು. ಉಮೇಶ್ ಕೋಟ್ಯಾನ್ ವಾಮದಪದವು ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗೆ ನವಗ್ರಹ ಸಹಿತ ರುದ್ರಯಾಗ ಪ್ರಾರಂಭವಾಗಿ ಮಧ್ಯಾಹ್ನ ಯಾಗದ ಪೂರ್ಣಾಹುತಿಯೊಂದಿಗೆ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Share this article