ನಾಡ್ಪಾಲು: ಪಶ್ಚಿಮ ಘಟ್ಟದ ಪಾದದ ಮೂಲಭೂತ ಸೌಕರ್ಯಗಳಿಲ್ಲದ ಕುಗ್ರಾಮ

KannadaprabhaNewsNetwork |  
Published : Nov 22, 2024, 01:20 AM IST
ರಸ್ತೆ | Kannada Prabha

ಸಾರಾಂಶ

ನಾಡ್ಪಾಲು ಗ್ರಾಮ ನಕ್ಸಲಿಸಂ ಹುಟ್ಟಿ ಬೆಳೆಯುವುದಕ್ಕೆ ಎಲ್ಲಾ ರೀತಿಯಲ್ಲಿಯೂ ಯೋಗ್ಯವಾಗಿದೆ. ಆರಕ್ಕೇರದೇ ಮೂರಕ್ಕಿಳಿಯದೇ ಬದುಕುತ್ತಿರುವ ಜನರಿದ್ದಾರೆ.

ರಾಮ್‌ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಎನ್‌ಕೌಂಟರ್ ನಲ್ಲಿ ಮೃತಪಟ್ಟ ಮೋಸ್ಟ್ ವಾಂಟೆಡ್‌ ನಕ್ಸಲ್ ನಾಯಕ ವಿಕ್ರಂ ಗೌಡ ಹುಟ್ಟಿ ಬೆಳೆದು ಕೊನೆಗೆ ಮಣ್ಣಾದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ನಕ್ಸಲಿಸಂ ಹುಟ್ಟಿ ಬೆಳೆಯುವುದಕ್ಕೆ ಎಲ್ಲಾ ರೀತಿಯಲ್ಲಿಯೂ ಯೋಗ್ಯವಾಗಿದೆ!

ಪಶ್ಚಿಮ ಘಟ್ಟದ ಪಾದದ ಕೆಳಗಿರುವ ದಟ್ಟ ಕಾಡಿನ ನಡುವೆ, ಹೊರಜಗತ್ತಿನಲ್ಲಿರುವ ನಾಗರಿಕ ಮೂಲಭೂತ ಸೌಕರ್ಯಗಳಿಲ್ಲದ, ಸರ್ಕಾರದ ಯೋಜನೆಗಳು ತಲುಪದ, ರಾಜಕಾರಣಿಗಳ ಭಾಷಣಗಳು ಕೇಳದ ಊರಿದು.

ಆದರೆ ಇಲ್ಲಿಯೂ ಆರಕ್ಕೇರದೇ ಮೂರಕ್ಕಿಳಿಯದೇ ಬದುಕುತ್ತಿರುವ ಜನರಿದ್ದಾರೆ, ಅವರ ಪುಟ್ಟ ಮನೆಗಳಿವೆ, ಅಂಗೈಯಗಲದ ದಾಖಲೆಗಳಲ್ಲಿ ತಮ್ಮದಲ್ಲದ ಜಮೀನಿದೆ, ತೋಟ ಗದ್ದೆಗಳಿವೆ.

ಇಲ್ಲಿಯೇ ಸಮೀಪದಲ್ಲಿ ಕೂಡ್ಲು ಎಂಬಲ್ಲಿ ರಮಣೀಯವಾದ ಜಲಪಾತವಿದೆ. ಅದನ್ನು ನೋಡುವುದಕ್ಕೆ ಪ್ರತಿವರ್ಷ ಸಾವಿರಾರು ಮಂದಿ ಬರುತ್ತಾರೆ, ಅವರಿಗಾಗಿ ಪ್ರವಾಸೋದ್ಯಮ ಇಲಾಖೆ ಕಚ್ಚಾ ರಸ್ತೆಯನ್ನು ನಿರ್ಮಿಸಿದೆ. ಆದರೆ ಇಲ್ಲಿಯೇ ಕೂಗಳತೆಯ ದೂರದಲ್ಲಿರುವ ಅಜ್ಜೊಳ್ಳಿ, ಮೇಗದ್ದೆಗಳಿಗೆ ರಸ್ತೆಯೇ ಇಲ್ಲ. ತೆಂಗುಮಾರ್, ತಿಂಗಳನಕ್ಕಿ, ಪೀತಬೈಲ್‌ಗೆ ರಸ್ತೆ ಎಂಬ ರಚನೆಯೊಂದಿದೆ. ಆದರೆ ಅದಕ್ಕೊಂದು ರಸ್ತೆಯ ರೂಪ ಇಲ್ಲ, ಡಾಮರಂತೂ ಆಗಿಯೇ ಇಲ್ಲ. ಇಲ್ಲಿರುವ ಬಹುತೇಕ ಮಲೆಕುಡಿಯ ಕುಟುಂಬಗಳು, ಸ್ಥಿತಿವಂತರಲ್ಲ. ಆದ್ದರಿಂದ ಅವರಲ್ಲಿ ಬೇರೆ ವಾಹನಗಳು ಬಿಡಿ, ಸೈಕಲ್‌ ಕೂಡ ಇಲ್ಲ! ಮಳೆಗಾಲ‌ ಎಂಬುದು ಮಾತ್ರ ಈ ಭಾಗಕ್ಕೆ ಶಾಪವಿದ್ದಂತೆ, ಹೊರಪ್ರಪಂಚದ ಸಂಪರ್ಕವನ್ನೇ ಕಡಿದು ಬಿಡುತ್ತದೆ. ಶಾಲೆ, ಆಸ್ಪತ್ರೆ, ಅಂಗಡಿ ಇತ್ಯಾದಿಗಳಂತೂ ಇಲ್ಲಿ ಕನಸೇ ಸರಿ.

ಇಲ್ಲಿ ಒಂದಿಬ್ಬರ ಬಳಿ ಬಿಟ್ಟರೆ ಬೇರೆಯವರ ಬಳಿ ಮೊಬೈಲೂ ಇಲ್ಲ, ಯಾಕೆಂದರೆ ಇಲ್ಲಿ ನೆಟ್ವರ್ಕೇ ಇಲ್ಲ, ಆಗುಂಬೆಯಲ್ಲಿ ಬಿಎಸ್‌ಎನ್‌ಎಲ್‌ ಟವರ್ ಇದೆ. ಆದರೆ ಅದರಿಂದ ಮೊಬೈಲಿಗೆ ಸಿಗ್ನಲ್ ಸಿಕ್ಕಿದ್ದೆ ಕಡಿಮೆ, ಮೊಬೈಲಿನಲ್ಲಿ ಮಾತನಾಡಬೇಕಾದರೆ ಹತ್ತಾರು ಕಿ. ಮೀ. ಆಗುಂಬೆ ಹತ್ತಬೇಕು ಎನ್ನುತ್ತಾರೆ ಇಲ್ಲಿನ ರಂಗಪ್ಪ ಗೌಡ.

ಬರೇ ಇಲ್ಲಗಳ ಈ ಗ್ರಾಮಗಳಲ್ಲಿ ಹುಟ್ಟಿದ ವಿಕ್ರಂ ಗೌಡನಂತಹ ಅಲ್ಪಸ್ವಲ್ಪ ವಿದ್ಯಾವಂತರು ವ್ಯವಸ್ಥೆಯ ವಿರುದ್ಧ ಸಿಡಿದದ್ದು. ಅವ್ಯವಸ್ಥೆಗಳಿಂದಾಗಿಯೇ ವ್ಯವಸ್ಥೆಯ ವಿರುದ್ಧ ಕ್ರಾಂತಿಯ ವಿಚಾರಗಳನ್ನು ಬಿತ್ತುವ ನಕ್ಸಲೀಯರು ಇಲ್ಲಿ ಅನುಕಂಪ ಗಳಿಸಿಕೊಂಡಿದ್ದು.

ಆದ್ದರಿಂದಲೆ ಕಾರ್ಕಳ ತಾಲೂಕಿನ ಈದು, ಬೊಳ್ಳೆಟ್ಟು, ಕನ್ಯಾಲು, ನೂರಲ್ಬೆಟ್ಟು, ಅತ್ತ ಚಿಕ್ಕಮಗಳೂರಿಗೆ ತಾಗಿಕೊಂಡಿರುವ ಕಿಗ್ಗ, ನೆಮ್ಮಾರು, ಕೆರೆಕಟ್ಟೆ, ಶೀರ್ಲು ಪ್ರದೇಶಗಳು ನಕ್ಸಲರ ಅಡಗುದಾಣಗಳಾಗಿವೆ, ನಿತ್ಯ ಓಡಾಟದ ದಾರಿಗಳಾಗಿವೆ.

20 ವರ್ಷಗಳ ಹಿಂದೆ ಈ ಎಲ್ಲಾ ಇಲ್ಲಗಳಿಂದ ಬೇಸತ್ತ ವಿಕ್ರಮ್‌ ಗೌಡ ಭಂಡ ಧೈರ್ಯದಲ್ಲಿ ಬಂದೂಕು ಹಿಡಿದ ಮತ್ತು ಬಂದೂಕಿಗೇ ಬಲಿಯಾದ. ಅಂದು ಇದ್ದ ಬಹುತೇಕ ಎಲ್ಲಾ ಇಲ್ಲಗಳು ಇಂದೂ ಆ ಊರಿನಲ್ಲಿವೆ.

ಇನ್ನಾದರೂ ಸರ್ಕಾರ ಕಣ್ತೆರೆದೀತೇ...

ನಮ್ಮೂರಿನಲ್ಲಿ ನಕ್ಸಲ್ ಚಟುವಟಿಕೆಗೆ ಆರಂಭವಾಗಿ 20 ವರ್ಷಗಳು ಹೆಚ್ಚಾಗಿವೆ. ಈ ಕಾರಣಕ್ಕಾಗಿಯೇ ನಮ್ಮ ಊರು ಪ್ರಚಾರದಲ್ಲಿದೆ, ಆದರೆ ಅಭಿವೃದ್ಧಿ ಮಾತ್ರ ಯಾವುದೂ ಆಗಿಲ್ಲ. ಪೊಲೀಸರನ್ನು ಬಿಟ್ಟರೆ ನಮ್ಮನ್ನು ಕೇಳುವುದಕ್ಕೂ ಯಾರೂ ಬರುವುದಿಲ್ಲ. ಇತ್ತೀಚೆಗೆ ವಿದ್ಯುತ್ ಸಂಪರ್ಕ ಬಂದಿದೆ. ಆದರೆ ಕಡಿತ, ತಿಂಗಳುಗಟ್ಟಲೆ ವಿದ್ಯುತ್ ಸಮಸ್ಯೆ, ಇವೆಲ್ಲವುಗಳಿಂದ ನಾವೆಲ್ಲರೂ ರೋಸಿ ಹೋಗಿದ್ದೇವೆ. ನಮ್ಮ ಮುಂದಿನ ಜನಾಂಗ ಇಲ್ಲಿ ಹೇಗೆ ಬದುಕಬೇಕು ? ಇನ್ನಾದರೂ ಸರ್ಕಾರ ನಮ್ಮ ಬಗ್ಗೆ ಕಣ್ತೆರೆಯಬೇಕು ಎನ್ನುತ್ತಾರೆ ಮೇಗದ್ದೆಯ ನೀಲಗೌಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು
ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕಸರತ್ತು ಸಿದ್ದರಾಮಯ್ಯ ಬಜೆಟ್‌ ತಯಾರಿ